ಭಾಗ 5. ತನಿಖೆ | ರೇಲಿ ಬೈಸಿಕಲ್ಲು

Share:
ಭಾಗ 5.  ತನಿಖೆ


ಭಾನುವಾರ ಬೆಳಗಿನಜಾವ ೨.೩೦ಕ್ವಾಟ್ರಸ್ ನಲ್ಲಿ ಮಲಗಿದ್ದ ಎಸ್ ಐ ನಟರಾಜುವಿನ ಫೋನು ಭಜಿಸುತ್ತದೆ.

"ಹೇಳ್ರಿ ಸೀನಪ್ಪ. ಇನ್ನು ಇವಾಗ್ ಕಣ್ಣು ಕೂರಿತ್ತಲ್ರೀ"

"ಸರ್, ದೊಡ್ ಕೇಸು. ಶ್ರೀನಿವಾಸ ವೈನ್ಸ್ ಇದ್ಯಲ ಸರ್. ಅಲ್ಲಿಂದ ಒಂದ್ ೩೦೦ ಮೀಟ್ರು ಎಂ ಜಿ ರೋಡ್ ಕಡೆಗೆ, ಮರ್ಡರ್ ಆಗ್ಬಿಟ್ಟಿದೆ ಸಾರ್. ಶ್ರೀಹರಿ ಅಂತೆ ಹೆಸರು"

"ಒಹ್, ನಾನು ಬರ್ಬೇಕಾ? A ನ ಕೇಸು?"

"ಇಲ್ಲ ಸಾರ್, ಬೊಮ್ಮನ್ ಅಂತೆ. ಸುಮಾರು 55 ಆಗಿದೆ. ಅಷ್ಟೇ ಸದ್ಯಕ್ ಸಿಕ್ಕಿರೋ ಇನ್ಫಾರ್ಮೇಶನ್"

"ಸರಿ, ಫೋರೆನ್ಸಿಕ್ ಕರ್ಸಿ ಇನಿಷಿಯಲ್ ರಿಪೋರ್ಟ್ ರೆಡಿ ಮಾಡಿ. ಆಮೇಲೆ ಪೋಸ್ಟ್ ಮಾಟಂ. ಏನು?"

"ನೀವು ಬರಲ್ವಾ ಸಾರ್?"

"ಬೊಮ್ಮನ್ ಅಂತೀರ. ನಾನ್ಯಾಕ್ರೀ. ರೌಂಡ್ಸ್ ಇದ್ದರಲ್ಲ, ವೆಂಕ್ಟೇಶ, ಅವ್ನು ಇನ್ನೊಬ್ಬ ಬಸ್ ಸ್ಟಾಂಡ್ ಕಡೆಯೇವ್ನು. ಇಬ್ರುನು ಕರುಸ್ಕೊಳಿ. ರಿಪೋರ್ಟ್ ರೆಡಿ ಮಾಡ್ಸಿ. ಬೆಳಿಗ್ಗೆ ಬೇಗ ಬರ್ತೀನಿ"

ಬೆಳಿಗ್ಗೆ ೭ ಗಂಟೆ, ನಟರಾಜು ಸ್ಟೇಷನ್ ಗೆ ಹೊರಟ ಸಮಯ. ಜೀಪು ಸ್ಟೇಷನ್ ಅಂಗಳ ತಲುಪಿದ್ದಂತೆಯೇ ನಟರಾಜುವಿಗೆ ಸೀನಪ್ಪ ಯಾವುದೊ ವ್ಯಕ್ತಿಯ ಬಳಿ ಗಟ್ಟಿ ಧ್ವನಿಯಿಂದ ಮಾತನಾಡುತ್ತಿರುವುದು ಕೇಳಿಬರುತ್ತದೆ.

"ಯೋ ನಿಂದೆನಯ್ಯ ಬೆಳಿಗ್ಗೆ ಬೆಳಿಗ್ಗೆ. ಹೇಳ್ತಿದ್ದೀನ್ ತಾನೇ, ಇಲ್ಲಿ ಕೊಲೆ ಕೇಸು ತಲೆ ಮೇಲೆ ನಿಂತಿದೆ. ನಿನ್ ಬಾಡಿಗೆ ವಸೂಲಿ ಮಾಡಕ್ ನಾವ್ ಬರ್ಬೇಕಾ? ನಡಿ ನಡಿ. ಕೆಲಸ ನೋಡು ಹೋಗು" ಎಂದು ಮುದಿ ವಯಸ್ಸಿನ ವ್ಯಕ್ತಿಯನ್ನು ದಬ್ಬುತ್ತಿದ್ದ ಸೀನಪ್ಪ.

"ರೀ, ನಿಲ್ರಿ ಸ್ವಲ್ಪ. ಅವ್ರ್ ವಯಸ್ಸಿಗಾದ್ರು ಬೇಡ್ವಾ ಮರ್ಯಾದೆ? ಏನ್ರಿ ಸೀನಪ್ಪ ನೀವು ಬುದ್ಧಿಕಮ್ಮಿ ಆಗ್ತಾ ಬರ್ತಿದೆ ನಿಮಗೆ" ಶಾಂತ ಸ್ವಭಾವದ ಮನುಷ್ಯನೆಂದೇ ಸುತ್ತಲೂ ಪ್ರಸಿದ್ದಿ ಗಳಿಸಿರುವ ನಟರಾಜು, ಆ ವ್ಯಕ್ತಿಯನ್ನು ನಿಲ್ಲಿಸಿ ಸೀನಪ್ಪನಿಗೆ ಹೇಳುತ್ತಾರೆ.

"ಸಾರಿ ಸರ್, ಮನೆ ಬಾಡಿಗೆ ಇರೋರು ಬಾಡಿಗೆನು ಕೊಡ್ತಿಲ್ಲ, ಖಾಲಿನೂ ಮಾಡ್ತಿಲ್ಲ. ಕುಡ್ಕೊಂಡ್ ಗಲಾಟೆ ಮಾಡ್ತಾನೆ, ಮನೆ ಬಿಡ್ಸಿ ಕೊಡಿ ಅಂತ ಅಂದ್ರು ಸಾರ್. ಬೆಳಿಗ್ಗೆನೇ ಮರ್ಡರ್ ನೋಡಿಬಿಟ್ನಲ್ಲ. ಹಾಗ್ ಮಾತಾಡ್ಬಿಟ್ಟೆ!" ತಗ್ಗಿದ ಕ್ಷಮೆಯ ಧ್ವನಿಯಲ್ಲಿ ಸೀನಪ್ಪ ಹೇಳಿದ.

"ನೀವು ಹತ್ತೂವರೆ ಹಂಗೆ ಬನ್ನಿ. ಒಂದು ಕಂಪ್ಲೇಂಟ್ ತೊಗೊಳುವ. ಕಾನ್ಸ್ಟೇಬಲ್ ನ ನಿಮ್ ಜೊತೆ ಕಳ್ಸೋಣ. ಅವ್ರು ಏನ್ ಮಾಡಬೋದು ನೋಡ್ತಾರೆ. ಸರಿನಾ ಯಜಮಾನರೇ?" ಎಂದು ಸಮಾಧಾನದ ಮಾತನ್ನಾಡಿ ಬುದ್ದಿವಂತಿಕೆಯಿಂದ ಆ ವ್ಯಕ್ತಿಯನ್ನು ಸಾಗು ಹಾಕಿದ್ದ ನಟರಾಜು.
ಹತ್ತಾರು ಕಪಟ ಮರ್ಯಾದೆ ಸ್ವೀಕರಿಸಿದ ನಂತರ, ತನ್ನ ಕುರ್ಚಿಯಲ್ಲಿ ಕುಳಿತು ಸೀನಪ್ಪನಿಗೆ ಬರಹೇಳಿದ.

"ಏನ್ರಿ ಅಪ್ಡೇಟ್?"

"ಬಾಡಿ ನೋಡಿ ಡಾಕ್ಟ್ರು ಹೇಳುದ್ರು ಸತ್ಮೇಲು ಸುಮಾರ್ ಹೊತ್ತು ಚುಚ್ಚಿರೋ ಥರ ಇದೆ ಅಂತ. ಅಷ್ಟ್ ಬಿಟ್ರೆ ಇನ್ನೇನು ಇಲ್ಲ ಸಾರ್"

"ರಿವೆಂಜ್ ಇರ್ಬೋದಾ? ಬೇರೆನ್ ಡೀಟೇಲ್ಸ್ ಇದೆ"

"ಫೋರೆನ್ಸಿಕ್ ಮತ್ತೆ ಪೋಸ್ಟ್ ಮಾಟಂ ರಿಪೋರ್ಟ್ ಮದ್ಯಾನ ಆಗುತ್ತೆ ಸಾರ್ ಬರೋದುಇಮ್ಮಿಡಿಯೇಟ್ ಫ್ಯಾಮಿಲಿ ಅಂದ್ರೆ ಹೆಂಡ್ತಿಇಬ್ರು ಹೆಣ್ಣು ಮಕ್ಳು ಸ್ಟೇಟ್ಮೆಂಟ್ ತೊಗೊಂಡೆಹೇಳೋ ಅಂಥದ್ದೇನು ಇಲ್ಲ ಅವರ್ದುನಿಮಗೆ ಹೇಳುದ್ನಲ್ವಾ ಸಾರ್,   ಜಾತಿ ಹೆಂಗುಸ್ರು ಏನ್ ಕೊಲೆ ಮಾಡ್ತಾರೆ ಬಿಡಿಅದ್ಬಿಟ್ರೆ ಸತ್ತಿರೋನ್ ಜೊತೆ ರಾತ್ರಿ ಕಡೇಲಿ ಅವ್ನ್ ಫ್ರೆಂಡ್ ರಂಗಣ್ಣ ಅಂತ ಇದ್ನಂತೆಅವ್ನ ಬರಹೇಳಿದ್ದೀನಿಹತ್ತಿರದ್ ಗಂಡು ಮಗ ಅಂತ ಇರೋದು ಒಬ್ನೇ ಜನಾರ್ಧನ ಅಂತಅವ್ನು ವಿಕ್ಟಿಮ್ ತಂಗಿ ಮಗಅವನಿಗೂ ಕಾಲ್ ಮಾಡಿದ್ದೆಏನಾದ್ರು ಸಿಗಬೋದ ಅಂತಇಬ್ರು ಏಳು ಏಳುವರೇಲಿ ಬರ್ಬೋದು ಸರ್"

"ಅಂದ್ರೆ ಇನ್ನೊಂದ್ ಹತ್ತು ನಿಮಿಷ? ಸರಿ ವಿಕ್ಟಿಮ್ ಟ್ರ್ಯಾಕ್ ರೆಕಾರ್ಡ್?"

"ವೆಂಕ್ಟೇಷನ್ನ ಕಳ್ಸಿದ್ದೀನಿ ಸಾರ್ ವಿಚಾರಿಸಕ್ಕೆ. ನಾನು ಕೇಳಿದ್ ಮಟ್ಟಿಗೆ ಮರ್ಯಾದಸ್ತ ಅಂತೆ. ರಾಮಕೃಷ್ಣ ಹೆಗ್ಡೆ ಅವ್ರ್ ಕಾಲದಲ್ಲಿ ದಳದಲ್ಲಿ ಆಕ್ಟಿವ್ ಆಗಿ ಇದ್ನಂತೆ. ಗೌಡ್ರು ಬರೋ ಹೊತ್ಗೆ ಎಲ್ಲ ಬಿಟ್ಟಿದ್ದ ಅಂದ್ರು. ಕ್ಲೀನ್ ಚಿಟ್. ವಿಕ್ಟಿಮ್ ಅಪ್ಪ ಸತ್ತು ಒಂದು ವಾರ ಆಗಿತ್ತು ಅನ್ನೋದ್ ಬಿಟ್ರೆ ಅಂತ ಹೇಳ್ಕೊಳೋ ಸುದ್ದಿ ಏನು ಇಲ್ಲ ಸರ್."

"ಸರಿ. ಅವ್ರು ಯಾರೋ ಇಬ್ರು ಹೆಸ್ರೇಳುದ್ರಲ್ಲ. ಬಂದ್ಮೇಲ್ ಕಳ್ಸಿ"  

ಹದಿನೈದು ನಿಮಿಷದ ನಂತರ ಸೀನಪ್ಪ ನಟರಾಜುವಿನ ಬಳಿಗೆ ಬಂದು ರಂಗನಾಥ ಮತ್ತು ಜನಾರ್ಧನರು ಬಂದಿರುವ ವಿಷಯ ತಿಳಿಸಿ, ನಟರಾಜುವಿನ ಆಶಯದಂತೆ ಅವರಿಬ್ಬರನ್ನು ಒಳಗೆ ಕರೆದು ತಾನು ಪಕ್ಕದ ಕುರ್ಚಿಯಲ್ಲಿ ಕುಳಿತ.

"ನಾನು ಜಾಸ್ತಿ ಪ್ರಶ್ನೆ ಕೇಳಕ್ಕೆ ಹೋಗಲ್ಲ. ಇಬ್ರು ಒಂದ್ ರೀತಿ ಬೇಜಾರಲ್ಲಿರ್ತೀರಿ. ಏನ್ ಗೊತ್ತು, ವಿಕ್ಟಿಮ್ ರೊಟೀನ್, ಕಡೆ ಬಾರಿ ಯಾವಾಗ್ ನೋಡಿದ್ದು, ಏನೇನ್ ನೆನಪಾಗುತ್ತೆ ಎಲ್ಲ ಹೇಳಿ ನೀವು ಹೊರಡ್ಬೋದು" ಎಂದ ನಟರಾಜು.

"ಸರ್, ನಾನು ರಂಗನಾಥ್ ಅಂತ. ಹರಿಗೆ ಹೈ ಸ್ಕೂಲ್ ಲಿ ಕ್ಲಾಸ್ಮೇಟ್ ಸಾರ್ ನಾನು. ಅವಾಗಿಂದ್ಲು ಪರಿಚಯ ನಂಗೆ. ನೆನ್ನೆ ರಾತ್ರಿ ನನ್ ಜೊತೇನೆ ಇದ್ದ ಸಾರ್. ದಿನಾ ಬಂದಂಗೆ ನಮ್ಮ ಮನೆಗೆ ನಿನ್ನೆನೂ ಬಂದಿದ್ದ. ಆ ಶ್ರೀನಿವಾಸ ವೈನ್ಸ್ ಇದ್ಯಲ ಸರ್. ಅಲ್ಲಿಗೆ ನಾವು ದಿನ ಹೋಗೊ ರಿವಾಜು. ನೆನ್ನೆನು ಹೋಗಿದ್ವಿ. ಸುಮಾರು ಹನ್ನೊಂದು ವರೆಗೆಲ್ಲ ಗಾಡಿ ಹತ್ತಿ ಹೊರ್ಟ. ಬೆಳಿಗ್ಗೆ ನೋಡುದ್ರೆ ಈ ಸುದ್ದಿ!"

ಪಕ್ಕದಲ್ಲೇ ಜನ್ನ ತಾನು ಏನು ಹೇಳಬೇಕೆಂಬುದನ್ನು ಪೂರ್ವಾಭ್ಯಾಸ ಮಾಡುವಂತೆ ಭಯದಿಂದ ಕುಳಿತಿದ್ದ.

"ಸರಿ, ನಿಮ್ದು ಹೇಳಿ" ಎಂದು ಜನಾರ್ಧನ ನ ಕಡೆ ಕೈ ಮಾಡಿ ತೋರಿಸಿದ್ದ ನಟರಾಜು.

"ನಾನು ಜನಾರ್ಧನ ಅಂತ ಸಾರ್. ಅವ್ರ ತಂಗಿ ಮಗ. ನಾನು ಬೆಂಗಳೂರಲ್ಲಿನೆ ಇರೋದು. ವಾರಕ್ಕೊಮ್ಮೆ ಬರ್ತೀನಿ ಅಷ್ಟೇ. ನಾನು ಅವ್ರನ್ನ ನೋಡಿದ್ದು ನೆನ್ನೆ ಮಧ್ಯಾಹ್ನ."

ಮಾತು ನಿಂತದ್ದನ್ನು ಗಮನಿಸಿ ನಟರಾಜು, "ಸೀನಪ್ಪ ರಂಗನಾಥ್ ಸರ್ ಗೆ ಒಂದ್ ರೆಜಿಸ್ಟ್ರಿ ರೆಡಿ ಮಾಡಪ್ಪ." ಎಂದ

ಸೀನಪ್ಪ ಎದ್ದು ಹೊರಟ. ರಂಗನಾಥನಿಗೆ ಏನೆಂದು ತಿಳಿಯದೆ ಹೋಯಿತು.

"ರಂಗನಾಥ್ ಅವ್ರೆ, ನೀವು ಸ್ವಲ್ಪ ದಿನ ಆಗೋವರ್ಗು ಡೈಲಿ ಬಂದು ಸ್ಟೇಷನ್ ಗೆ ರಿಪೋರ್ಟ್ ಮಾಡ್ಕೊಳಿ" ಎಂದ ನಟರಾಜು.

"ಅದ್ಯಾಕ್ ಸರ್?"

"ಗಾಬರಿ ಏನ್ ಬೇಡ್ರಿ. ನೀವೇ ಲಾಸ್ಟ್ ನೋಡಿರೋದು ಅಲ್ವಾ. ಪ್ರೊಸಿಜರ್ ಅಷ್ಟೇನೆ. ನೀವು ಸ್ವಲ್ಪ ಆಚೆ ಇರಿ. ಈ ಹುಡ್ಗನ್ನ ವಿಚಾರಿಸಿ ಕಳ್ಸೋಣ. ಕಾರ್ಯ ಕೆಲಸ ಅಂತ ಇರುತ್ತೆ" ಎಂದು ರಂಗಣ್ಣನನ್ನು ಆಚೆಗೆ ಕಳುಹಿಸಿದ.

"ಲಾಸ್ಟ್ ನೋಡಿದ್ದಾಗ, ಏನ್ ಮಾತಾಡುದ್ರಿ? ಏನಾದ್ರು ನೆನಪಿದ್ರೆ ಹೇಳಪ್ಪ. ಹಾಗೆ, ನಿಮ್ ಮಾವನ್ ಕಂಡ್ರೆ ಯಾರಿಗಾದ್ರೂ ಆಗ್ತಿರ್ಲಿಲ್ವಾ? ಈ ರಂಗಪ್ಪನ್ ಜೊತೆ ಅವ್ರ್ ಹೇಗಿದ್ರು?"

"ನಾನು ನಮ್ ಮಾವನ್ ಜೊತೆ ಅಷ್ಟ್ ಸಮಯ ಕಳ್ದಿಲ್ಲ ಸರ್. ರಂಗಣ್ಣ ನಮ್ ಮಾವ ಯಾವಾಗಿಂದ್ಲೋ ಸ್ನೇಹಿತರು. ಲಾಸ್ಟ್ ಟೈಮ್ ಸಿಕ್ಕಾಗ ನಮ್ ಅಜ್ಜನ ಸೈಕಲ್ ಮಾರ್ತೀನಿ ಅಂತ ಮಾತಾಡಿದ್ ಬಿಟ್ರೆ ಇನ್ನೇನು ಇಲ್ಲ"

"ಸೈಕಲ್ ಮಾರೋದ್ರಲ್ಲಿ ಏನ್ ನಿಮ್ ಹತ್ರ ಹೇಳೋದ್ ಇರತ್ತೆ?"

"ಅದು ನಮ್ ತಾತನ ಹಳೆ ಸೈಕಲ್ ಸಾರ್. ಬ್ರಿಟಿಷ್ ಕಾಲದ್ದು 1932 ಇಂಗ್ಲೆಂಡ್ ಮಾಡೆಲ್. ಬೆಂಗಳೂರಲ್ಲಿ ಬಿಡ್ ಹಾಕುದ್ರೆ 50 ಸಾವಿರ ಹೋಗಬೋದು ಅಂತಾರೆ ಸಾರ್"

ಜನ್ನನ ಮಾತು ಮುಗಿದಿದ್ದನ್ನು ಗಮನಿಸಿದ ನಟರಾಜು ಸೀನಪ್ಪನನ್ನು ಮತ್ತು ರಂಗನಾಥನನ್ನು ಕರೆಸಿದ.

"ರೀ ರಂಗನಾಥ್, ನಿಮ್ ಜೊತೆ ಏನ್ ಮಾತು ಕಥೆ ಅಯ್ತ್ರಿ ನೆನ್ನೆ ರಾತ್ರಿ!"

"ಎಲ್ಲ ಮಾಮೂಲಿ ಸಾರ್, ಹೇಳ್ಕೊಳೋ ಅಂಥದ್ ಏನು ಇಲ್ಲ. ಅವ್ರಪ್ಪನ ಕಾರ್ಯದ್ ಬಗ್ಗೆ ಮಾತಾಡ್ತಿದ್ದ ಅಷ್ಟೇ"

"ಎಲ್ಲಾನು ಮಾಮೂಲಿ ನ? ಹನ್ನೊಂದೂವರೆಗೆ ಮನೆಗೆ ಹೋಗೋದು ಮಾಮೂಲಿನ"

"ಇಲ್ಲ ಸಾರ್,  ಹರಿಗೆ ರಾಜಕಾರಣ ಅಂದ್ರೆ ಮಾತಿಗೆ ಕೂರ್ತಾನೆ. ನಾವೆಲ್ಲ ಹೆಗ್ಡೆ ಅವ್ರ್ ಕಾಲದಲ್ಲಿ ದಳದಲ್ಲಿ ಇದ್ವಿ ಸಾರ್. 92 93 ಟೈಮಲ್ಲಿ ಹೆಗ್ಡೆ ಅವ್ರ್ ದಳ ಬಿಟ್ರು, ನಾವು ರಾಜಕೀಯ ನೇ ಬಿಟ್ವು. ಆ ಟೈಮ್ ಅಲ್ಲಿ ನಮ್ ಜೊತೆ ಒಬ್ಬ ಇದ್ದ ಸಾರ್ ಅಪ್ಪಾಜಿ ಅಂತ. ಇವಾಗ್ಲೂ ಗೌಡ್ರು ಪಕ್ಷದಲ್ಲೇ. ಅವ್ರ್ ಜೊತೆ ನೆನ್ನೆ ಕುಡಿದಾಗ ಸ್ವಲ್ಪ ಮಾತು ಕಥೆ ಆಯಿತು ಸಾರ್"

"ಯಾವ ವಿಷ್ಯದ್ ಬಗ್ಗೆ"

"ಹೆಗ್ಡೆ ಸರಿ ಅಂತ ಇವ್ರು, ಗೌಡ್ರು ಸರಿ ಅಂತ ಅವ್ರು, ಹೀಗೆ ಸುಮಾರ್ ಹೊತ್ತು ಮಾತಾಯ್ತು. ಆ ಕಾರಣಕ್ಕೇನೆ ಸ್ವಲ್ಪ ತಡ ಮನೆಗ್ ಹೊರಟಿದ್ದು"

ಮಾತನ್ನಾಲಿಸುತ್ತಲೇ ನಟರಾಜು ಸೀನಪ್ಪನ ಕಡೆಗೆ ನೋಡುತ್ತಾನೆ.
ಏನೋ ಅರ್ಥವಾದಂತೆ ಸೀನಪ್ಪ ಟೇಬಲ್ ಮೇಲೆ ಇದ್ದ ಪೆನ್ನು ಪೇಪರ್ ತೆಗೆದುಕೊಂಡು
"ನೋಟ್ ಮಾಡ್ಕೋತಿದ್ದೀನಿ ಸರ್" ಎಂದ.

"ಸರಿ, ನಿಮಗೆ ಅವ್ರ್ ತಂದೆದು ಸೈಕಲ್ ಅಂತೆ. ಅದರ ಬಗ್ಗೆ ಗೊತ್ತ?"

"ಹಾ ಗೊತ್ತಲ್ಲ ಸರ್.  ಹರಿ ಅದನ್ನ ಮಾರಬೇಕು ಅನ್ನೋ ವಿಷ್ಯ ಹೇಳ್ತಿದ್ದ. ಅವ್ನ್ ಯಾರೋ ಅರ್ಜುನ ಅಂತೆ ಡೀಲರ್. ಮುಂಚೆ ಜಾಸ್ತಿ ಹಣ ಆಫರ್ ಮಾಡಿ ಇವಾಗ ಅಷ್ಟೆಲ್ಲ ಆಗಲ್ಲ ಅಂತಿದ್ನಂತೆ"

ಅರ್ಜುನ ಹೆಸರು ಕೇಳಿದ ಕೂಡಲೇ ಚುರುಕಾಗಿತ್ತು ಸೀನಪ್ಪನ ಕಿವಿ. ಅರ್ಜುನ ಕೆಲಸ ಮಾಡುತ್ತಿದ್ದ ಮ್ಯೂಸಿಯಂ ಪ್ರಭಾವಿ ರಾಜಕಾರಣಿಯದ್ದು. ಆ ಕಾರಣಕ್ಕಾಗಿಯೇ ಅವರು ಹೆಗ್ಗಿಲ್ಲದೆ ವ್ಯವಹರಿಸುತ್ತಿದ್ದುದು. ಆಂಟಿಕ್ ವಸ್ತುಗಳನ್ನು ಕಮ್ಮಿ ರೇಟ್ ಗೆ ಪೀಡಿಸಿ ಪಡೆಯುವುದು. ಕೊಡದಿದ್ದರೆ ಕದಿಸುವುದು. ಈ ವಿಷಯ ಸೀನಪ್ಪನಿಗೂ, ತಕ್ಕ ಮಟ್ಟಿಗೆ ನಟರಾಜುವಿಗೂ ತಿಳಿದಿತ್ತು. 

"ಸಾರ್, ಅರ್ಜುನ?" ಎಂದು ಸೀನಪ್ಪ ನಟರಾಜುವಿಗೆ ಮೆಲುದನಿಯಲ್ಲಿ ಹೇಳಿದ.

"ಕರ್ಸಿ ಕಾಲ್ ಮಾಡಿ" ಎಂದು ಮೆಲುದನಿಯಲ್ಲೇ ಉತ್ತರ ಬಂದಿತ್ತು.

ಇದನ್ನೆಲ್ಲಾ ಕುಂತಲ್ಲೇ ಗಮನಿಸುತ್ತಿದ್ದ ಜನ್ನನಿಗೆ, ತಾನು ಮತ್ತು ಪುಟ್ಟು ಬಿದ್ದಿರುವ ಹಳ್ಳಕ್ಕೆ ಇನ್ನು ಮೂವರ ಸೇರ್ಪಡೆಯಾದಂತಾಗಿ ರಂಗಪ್ಪನು, ಅಪ್ಪಾಜಿಯು ಹಾಗು ಅರ್ಜುನನು ಒಡನಾಡಿಗಳಂತೆ ಕಂಡರು.

"ಸಾರ್, ಕಾಲ್ ಮಾಡಿದ್ದೆ, ಇಲ್ಲೇ ಪಕ್ದಲ್ಲೇ ಇದ್ದೀನಿ. ಎರಡೇ ನಿಮಿಷ ಬಂದೆ ಅಂದ!" ಎಂದ ಸೀನಪ್ಪ.
ಅರ್ಜುನ ಬರುವ ಸುದ್ದಿ ತಿಳಿದ ನಟರಾಜು, ಅವನ ವಿಚಾರಣೆ ಗುಪ್ತವಾಗಿ ನಡೆದರೆ ಒಳ್ಳೆಯದುು ಎಂದು ಜನ್ನ ಮತ್ತು ರಂಗನಾಥನನ್ನು ಏನಾದರು ಇದ್ದರೆ ಬಂದು ತಿಳಿಸುವಂತೆ ಹೇಳಿ ಕಳುಹಿಸಿಯೇ ಬಿಟ್ಟ. ಕಾರಣ ಅರ್ಜುನ ರಾಜಕಾರಣಿಯ ಆಪ್ತ, ಅವರ ಕೃಪಾಕಟಾಕ್ಷದಿಂದಲೇ ನಟರಾಜುವಿನ ಐಶ್ವರ್ಯ ಏರುತ್ತಿರುವುದು.


ಆಚೆ ಹೊರಟಿದ್ದ ಜನ್ನನನ್ನು ಮತ್ತೆ ಕರೆಸಿದ್ದ ಸೀನಪ್ಪ.

"ಏನಪ್ಪಾ ಹೊರಟೇಬಿಟ್ಟೆ. ಎಫ್ ಐ ಆರ್ ಗೆ ಸಿಗ್ನೇಚರ್ ಬೀಳ್ಬೇಕು ಇರು ನಿಂದು" ಎಂದು ಹೇಳಿ ಅವನನ್ನು ನಟರಾಜು ಕೂರುವ ಕೋಣೆಯ ಆಚೆಯಲ್ಲೇ ಕೂರಿಸಿ ಕಾಯುವಂತೆ ಹೇಳಿ ಅರ್ಜುನನ ವಿಚಾರಣೆಗೆ ಹೊರಟ. ಒಳಗಿನ ಸಂಭಾಷಣೆ ನಿಧಾನಕ್ಕೆ ಜನ್ನನ ಕಿವಿಗೆ ತಾಕಿತ್ತು.

"ಸಾರ್, ಮಾತಾಡಿದ್ದೆನೋ ನಿಜ. ಅವ್ನು ಕೊಡ್ತೀನಿ ಕೊಡಲ್ಲ ಅಂತ ಮಾತು ಮಾತಿಗೂ ವರಸೆ ತೋರಿಸಿದ್ದು ನಿಜ. ಆದರೆ ನೆನ್ನೆ ಫೈನಲ್ ಆಗಿ ಇಪ್ಪತ್ತೈದು ಸಾವಿರಕ್ಕೆ ಒಪ್ಸಿ ಅಡ್ವಾನ್ಸ್ ಹತ್ತುಸಾವಿರನು ಕೊಟ್ಟು ಕಳ್ಸಿದ್ದೆ. ಇವಾಗ್ ನೋಡುದ್ರೆ ನೀವು ಆಸಾಮಿನೇ ಇಲ್ಲ ಅಂತಿದ್ದೀರಾ?" 

ಅರ್ಜುನನಿಗಿರುವ ಸಂಪರ್ಕ ಅವನನ್ನು ಕೊಲೆಯಿಂದ ಉಳಿಸಬಲ್ಲದು. ಆ ಕಾರಣಕ್ಕಾಗಿಯೇ ಅವನಿಗೆ ವಿಷಯ ಮುಚ್ಚಿ ಇಡುವ ಅನಿವಾರ್ಯವಿಲ್ಲವೆಂದು ಸೀನಪ್ಪ ಅವನ ಹೇಳಿಕೆಯನ್ನು ಒಪ್ಪಿದ್ದ.

"ಸರ್, ಹೇಳೋದ್ ಮರ್ತೆ. ಡೀಲ್ ಫಿಕ್ಸ್ ಆಗೋಕೂ ಎರ್ಡ್ ದಿನದ್ ಮುಂಚೆ ನಮಗೆ ಯಾವಾಗ್ಲೂ ಕೆಲಸ ಮಾಡಿ ಕೊಡ್ತಾರಲ್ಲ. ಮೂವರು, ಇದೆ ಸೀನಪ್ಪೋರೆ ಪರಿಚಯ ಮಾಡಿ ಕೊಟ್ಟಿದು. ಅವ್ರಿಗೆ ಫೋನ್ ಮಾಡಿ ಹರಿ ಮೇಲೆ ಮತ್ತೆ ಆ ಸೈಕಲ್ ಮೇಲೆ ಕಣ್ಣು ಇಡೋಕೆ ಹೇಳಿದ್ದೆ! ಅವ್ರೇನಾದ್ರೂ?" ಎಂದ ಅರ್ಜುನ

"ಯಾರ್ ಸೀನಪ್ಪ ಆ ಮೂರು ಜನ?"

"ಪಿಕ್ ಪಾಕೆಟ್ ಮಾಡ್ತಿದ್ರಲ ನಟ್ರಾಜ್ ಸರ್ಅವ್ರಿಗೂ ಒಂದ್ ಕೆಲಸ ಆಗುತ್ತೆ ಅಂತ ಇಲ್ಲಿ ರೆಫರ್ ಮಾಡಿದ್ದೆ"

ಮೆತ್ತೆನೋ ನೆನಪಿಸಿಕೊಂಡವನಂತೆ ಅರ್ಜುನ "ಹಾಗೆ ಇನ್ನೊಂದ್ ವಿಷ್ಯ ಸರ್. ನಾನು ನೆನ್ನೆ ಸಂಜೆ  ಆಸಾಮಿ ಹತ್ರ ಡೀಲ್ ಮಾತಾಡಿ  ಕಾಸು ಹತ್ತು ಸಾವಿರ ಕೊಟ್ಟಾಗ, ನನ್ ಜೊತೆ ನಮ್ ಮ್ಯೂಸಿಯಂ ಆಫೀಸ್ ಬಾಯ್ ಇದ್ದ. ಇವ್ರು ಬಂದು ಮಾತಾಡೋಕು ಮುಂಚೆ ಅಷ್ಟೇ ಅವ್ನು ನನ್ ಹತ್ರ ಹಣ ಕೇಳಿದ್ದ. ಕೊಡೋಕ್ ಆಗಲ್ಲ ಅಂದಿದ್ದೆ. ದುಡ್ಡು ನೋಡಿ ಅವನೇ ಏನಾದ್ರು ಫಾಲೋ ಮಾಡ್ಕೊಂಡು ಮಾಡಿರಬೋದು!" ಎಂದು ತನ್ನ ಅನುಮಾನ ವ್ಯಕ್ತಪಡಿಸಿದ್ದ.




"ಸರಿ. ಹೇಳ್ದೆ ಕೇಳ್ದೆ ಎಲ್ಲಿಗೂ ಹೋಗಂಗಿಲ್ಲ ನೀನು, ಈ ಕೇಸ್ ಸಾಲ್ವ್ ಆಗೋ ವರ್ಗು. ಏನಾದ್ರು ಬೇಕಿದ್ರೆ ಕಾಲ್ ಬರುತ್ತೆ." ಎಂದು ಹೇಳಿ ಕಳಿಸಿದ್ರು ಅರ್ಜುನನನ್ನು ನಟರಾಜು 

ತಾನು ಮತ್ತು ಪುಟ್ಟು ಮೀನಿನಂತಿದ್ದ ಪುಟ್ಟ ಪ್ರಪಂಚದಲ್ಲಿ ತಿಮಿಂಗಲದಂತಹ ದೊಡ್ಡ ಮೀನುಗಳು ಒಂದಾಗಿನೊಂದು ಬೀಳುತ್ತಿರುವುದನ್ನು ನೋಡಿ ವಿಸ್ಮಿತನಾದ. ಇದೆಲ್ಲವೂ ಸಂಭವನೀಯತೆಯ ಒಂದು ಭಾಗವಷ್ಟೇ ಎಂಬುದು ಅವನಿಗೆ ಅರಿವಿದ್ದಿತು. ಇಷ್ಟಾದರೂ ಜನ್ನನಿಗೆ ಅವನ ನಶೆಯಲ್ಲಿನ ನೆನಪಿನ ಮೇಲೆಯಾಗಲಿ, ಪುಟ್ಟುವಿನ ಮುಗ್ಧತೆಯಲ್ಲಾಗಿಲಿ ನಂಬಿಕೆ ಹುಟ್ಟಿರಲಿಲ್ಲ. ಇದರೊಂದಿಗೆ ಹೊಸದಾಗಿ ಜೋಡಿಸಿಕೊಂಡವು ಸಹಿ ಹಾಕಲು ರಂಗಣ್ಣನಿಗೆ ರೆಜಿಸ್ಟ್ರಿ, ಅಪ್ಪಾಜಿಯೊಂದಿಗೆ ಕುಡಿದ ಮಾವನ ರಾಜಕೀಯ ಸಂಭಾಷಣೆ, ಅರ್ಜುನನ ಸೈಕಲ್ ಡೀಲು, ಅವನು ನೇಮಿಸಿರುವ ಮೂವರು ಕಳ್ಳರು ಮತ್ತು ಮ್ಯೂಸಿಯಂ ನ ಆಫೀಸ್ ಬಾಯ್. ಪುಟ್ಟ ಅಥವಾ ನಾನು ಎರೆಡೇ ಮಾವನ ಸಾವಿಗೆ ಉತ್ತರ ಎಂದು ತಿಳಿದಿದ್ದ ಜನ್ನನಿಗೆ, ಇವೆಲ್ಲವೂ ಮಾವನ ಕೊಲೆಯ ಪ್ರಶ್ನೆಗೆ ಆಯ್ಕೆಗಳಾಗಿ ಸಾಲಾಗಿ ಕೂಡಿಕೊಂಡವು!

No comments