ಚಿರಾಯು -1

Share:


ರವಿವಾರ, ಮಾಡೋಕಿದ್ದ ಕೆಲಸ ಎಲ್ಲ ಮುಗಿಸಿ ಮೆತ್ತೆಯೇನೂ ತೋಚದೆ ಬೇಸರಕ್ಕೆ ಒಂದಾಗಿ ಎರಡನೆಯ ಬತ್ತಿ (cigar ) ಹಚ್ಚಿದ್ದ ಮಂಜುನಾಥ, ಹೊಗೆ ತೇಲಿಸುತ್ತ ಕುಳಿತಿದ್ದ.
ಏನೋ ನೆನಪಾದಂತಾಗಿ ಬ್ಯಾಗಿನಿಂದ ಲ್ಯಾಪ್ಟಾಪ್ ತೆಗೆದು, ಬೇಸರಕ್ಕೆ ಮದ್ದಿಗೆಂದು ಡೌನ್ಲೋಡ್ ಮಾಡಿದ್ದ ಸೇಕ್ರೆಡ್ ಗೇಮ್ಸ್ (sacred games) ವೆಬ್ ಸರಣಿಯನ್ನು ಪ್ರಾರಂಭಿಸಿದ.

ತೀರಾ ಹತ್ತಿರವಾದದ್ದೇನೋ ಕಂಡಂತೆ, ಮತ್ತೊಮ್ಮೆ ಮಗದೊಮ್ಮೆ ಒಂದೇ scene ರಿವೈನ್ಡ್  ಮಾಡಿದ.
“Ashwatthama hu mein Trivedi, Apun kabhi nahi marega!!”
ಸಾಕೆಂಬಷ್ಟು ಅದೇ scene ನೋಡಿದ ನಂತರ, ಬೇಸರದ ಭಾವ ಕಳಚಿ ಮುಗುಳ್ನಗೆಯ ಬಟ್ಟೆಯನ್ನು ತೊಟ್ಟು, ತನ್ನ ನೆನಪಿನ ಪುಸ್ತಕದಿಂದ 18 ವರ್ಷದ ಹಿಂದಿನ ಪುಟ ತೆರೆದು ಕೂತ.


ಶ್ರೀರಾಮ ರಾಮ ರಾಮೇತಿ ರಮೇ ರಾಮೇ ಮನೋರಮೇ
ಸಹಸ್ರನಾಮ ತತ್ತುಲ್ಯಂ ರಾಮ ನಾಮ ವರಾನನೇ

ಸಂಧ್ಯಾವಂದನೆ ಮುಗಿಸಿ ರಾಮನ ಜಪ ಮಾಡ್ತಾ ಕೂತಿದ್ರು ಶಂಕ್ರಜ್ಜ. ನೆಚ್ಚಿನ ಮೊಮ್ಮಗ ಎದ್ದೇಳೋ ತನಕ ದೇವ್ರ ಜಪ ಸಮಯ ಕಳಿಯೋ ಒಂದ್ ನೆಪ ಅಷ್ಟೇ!
   
ಕಾಲು ಮೈಲಿ ದೂರದಲ್ಲಿ ಎಲ್ಲೋ ತಮಟೆ ಸದ್ದು ಕೇಳಿತ್ತು. ಶಂಕ್ರಜ್ಜನ್ ಮಗ ರಾಮಣ್ಣ ಇದ್ಯಾವ್ ದೇವ್ರು ಇವಾಗ್ ಬಂತು ಅಂತೆ ಗೊಣಗುತ್ತ ತಂದೆಯ ಕಡೆ ದೃಷ್ಟಿ ಹಾಯಿಸುತ್ತಲೆ, ಶಂಕ್ರಜ್ಜ ತಮಟೆಯ ನಾದ ವಿನ್ಯಾಸದ ಪರಿಚಯವಿದ್ದಂತೆ

"ದೇವರಲ್ಲೋ, ಕಳೇಬರ! ಯಾರ್ ಸತ್ತ್ರು ನೋಡು" ಅಂದಿದ್ರು.

ಇವರ ವಂಗಲೋ ಗಲಾಟೆ ಕೇಳುತ್ತಾ ರಾಮಣ್ಣನ ಮಡದಿ ಅಡುಗೆ ಕೆಲಸ ನಿಲ್ಲಿಸಿ ಜಗುಲಿಯ ಕಡೆ ನಡೆದಳು. 

ಅಂಗಡಿಯ ದಾರಿ ಹಿಡಿದಿದ್ದ ಕ್ಷೌರಿಕ ವೆಂಕಟನನ್ನು ಮನೆಯೆದುರಿನಲ್ಲಿ ಕಂಡು ರಾಮಣ್ಣ ವಿಚಾರಿಸುತ್ತಲೆ  "ಮರಗೆಲಸದ ಗಡ್ಡದಜ್ಜನ ಮಗ ಅಂತೆ ಸಾಮಿ, ಚಿಕ್ಗೌಡ್ರ ತೆಂಗಿನ ತೋಟದ್ ತಾವು ನೆನ್ನೆ ಬೈಗಲ್ಲಿ ಕಳ್ಳು ಇಳ್ಸಿ ಕಂಠ ಪೂರ್ತಿ ಕುಡುದು ಬಿದ್ದಿದ್ನಂತೆ.  ಕಾಯಿ ಬಿದ್ದು ಬುಂಡೆ ಹೊಡೀತು ನೋಡಿ, ಉಸ್ರೇ ಇಲ್ಲ!"  ಎಂದು ಹೇಳುತ್ತಾ ನಿಲ್ಲದೆಯೇ ತನ್ನ ನಡಿಗೆ  ಮುಂದುವರಿಸಿದ್ದ.

ವೆಂಕಟನ ಉತ್ತರವನ್ನು ಪೂರ್ತಿ ಆಲಿಸಿದ್ದ  ರಾಮಣ್ಣನ ಮಗ ಮಂಜುನಾಥ ಎದ್ದು ಬಂದಿರೋದನ್ನು ಯಾರೂ ಗಮನಿಸಿರಲಿಲ್ಲ.
ತಮಟೆಯ ಸದ್ದಿನೊಟ್ಟಿಗೆ ಬಂದಿದ್ದ ಪ್ರಶ್ನೆಗೆ ಉತ್ತರ ಸಿಕ್ಕಂತೆ, ನಾಲ್ವರು ಜಗುಲಿಯಿಂದ ಮನೆಯೊಳಗೇ ಹೊರಟರು.

ಆದರೆ ಮಂಜು ಮಾತ್ರ ಗೊಂದಲದಲ್ಲಿ ತೊಯ್ದು ನಿಂತಂತಿತ್ತು.

"ಅಜ್ಜ, ಸಾಯೋದು ಅಂದ್ರೆ ಏನು?" ತನಗಿದ್ದ ಇಚ್ಛಾ ಶಕ್ತಿಯಲ್ಲಿ ಹೊಳೆದ ಪ್ರಶ್ನೆಗೆ ಉತ್ತರ ನಿರೀಕ್ಷಣೆಯಲ್ಲಿ ಮಂಜು.  

"ನೀನು ಹುಟ್ಟಿ ಮೂರೂ ನಾಲ್ಕೂ ಆಗ್ತಾ ಬಂತು ಮಗ ಸಂಕ್ರಾಂತಿಗೆ , ಅದಕ್ ಮುಂಚೆ ನೀನು ಇದ್ದಿದ್ಯಾ?"

"ಇಲ್ಲ ಅಜ್ಜ, ನಾ ಹುಟ್ಟಿ ಮೂರೂ ವರ್ಷ ಆಯಿತು ಅಂಬ್ರು ಅಮ್ಮ"

"ಹಂಗೆ, ಇಲ್ದೆ ಇರೋರು ಬನ್ನಿರೇ ಅದಕ್ಕೆ ಹುಟ್ಟು, ಇರೋರು ಹೋದ್ರೆ ಸಾವು ಮಗ. ನಿಂಗೆ ಹೋಗ್ತಾ ಹೋಗ್ತಾ ಗೊತ್ತಾಗ್ತದೆ . ಹುಟ್ಟಿದೋರು ಒಂದಿನ ವಯಸ್ಸಾಗ್ತಾ ಹೋಗ್ಲೇ ಬೇಕು ಮಗಾ" ಅಂದಿದ್ರು ಅಜ್ಜ.

ಅಮ್ಮ ಯಾವಾಗ್ಲೋ ಅಜ್ಜನಿಗೆ ಎಪ್ಪತ್ತಎಂಟಾಯ್ತು ಅಂತೇಳಿದ್ದು ನೆನಪಾಗಿ ದಿಗಿಲು ಹತ್ತಿತ್ತುಮಂಜನಿಗೆ. ಅಜ್ಜ ಸತ್ತ್ರೆ ಕಲ್ಯಾಣಸೇವೆ , ಉತ್ತತ್ತಿ ಯಾರು ತಂದು ಕೊಡತಾರೆ?  ಅಪ್ಪನ್ನ ಹತ್ತು ಸಲ ಕೇಳುದ್ರೆ ಬೈದು ಬೈದು ಒಮ್ಮೆ ತರ್ತಾರೆ, ಅಜ್ಜ ಹೇಳ್ದೆ ಕೇಳ್ದೆ ದಿನ ತಂದು ಅಪ್ಪಂಗೆ ಕಾಣದಂಗೆ ಕೊಡ್ತಾರೆ! ಇದು ಅವನ ಯೋಚನಾ ಶಕ್ತಿಯ ಅಚ್ಚುಕಟ್ಟಿಗೆ ಜೀವನದ ಅತಿ ದೊಡ್ಡ ಸಮಸ್ಯೆಯಾಗಿ ಕಾಣಿಸತೊಡಗಿತು.

"ಅಜ್ಜಾ, ಸಾಯದೆ ಇರೋಕೆ ಆಗಲ್ವಾ, ಜಪ ಮಾಡುವಾಗ ನೀನು ರಾಮನ್ನ ಕೇಳು!" ಅಜ್ಜ ಧ್ಯಾನ ಮಾಡೋದು ಅಂದ್ರೆ, ದೇವರ ಜೊತೆ ಭೌತಿಕ ಸಂಭಾಷಣೆ ಎಂದೇ ನಂಬಿದ್ದ ಮಂಜು ಕೇಳುತ್ತಾನೆ.

ಕಥೆ ಹೇಳೋಕೆ ಸಿಗೋ ಯಾವುದೇ ಸಣ್ಣ ಅವಕಾಶನು ಕಳೆದುಕೊಳ್ಳದ ಅಜ್ಜನ ನಿರೂಪಣೆ ಶುರುವಾಗಿತ್ತು.

"ಮಹಾ ತಪಸ್ವಿಗಳು, ವರ ತಗೊಂಡು ಎಷ್ಟೋ ವರ್ಸಾ ಬದುಕ್ತಾರೆ ಮಗ. ಪುರಾಣ ದಲ್ಲಿ ಒಂದ್ ಶ್ಲೋಕ ಹೇಳತ್ತೆ

ಅಶ್ವತ್ತಾಮಬಲಿರ್ವ್ಯಾಸೋ ಹನುಮಾನಶ್ಚ ವಿಭೀಷಣಹ ಕೃಪಶ್ಚ ಪರಶುರಾಮಶ್ಚ ಸಪ್ತಾಹ ಚಿರಂಜೀವನಮ್  ಅಂತ.

ಹಾಗಂದ್ರೆ, ಶ್ಲೋಕದಲ್ಲಿ ಹೇಳಿರೋ ಏಳು ಜನಕ್ಕೂ ಸಾವಿಲ್ಲ ಅಂತ ಪುಟ್ಟ"


ಅವನ ಜೀವನಕ್ಕಂಟಿದ್ದ ಸಮಸ್ಯೆಗೆ ಪರಿಹಾರ ಸಿಕ್ಕ ಹೊಳಪು ಮಂಜುವಿನ ಮುಖದಲ್ಲಿ ಉಕ್ಕಿತ್ತು.

"ಹೇಗ್ ಸಿಕ್ತು ಅವ್ರಿಗ್ ವರ?"

" ಅಶ್ವತ್ತಾಮನಿಗೆ ಅವ್ರಪ್ಪ ತಪಸ್ಸು ಮಾಡಿ ವರ ಪಡ್ಕೊಂಡ. ಬಲಿಗೆ ವಿಷ್ಣು ಕೊಟ್ಟ...." ಇನ್ನು ಮುಂದು ವರಿಸಿದ್ದ ಅಜ್ಜನನ್ನು ತನ್ನ ಮಾತಿನಿಂದ ನಿಲ್ಲಿಸಿ

"ಒಬ್ರಿಗೊಸ್ಕರ ಇನ್ನೊಬ್ರು ತಪಸ್ಸು ಮಾಡಬೋದ?”
ಭವಿಷ್ಯದಲ್ಲಿ ನಡೆಯಬೋದಿದ್ದ  ಅಚಾತುರ್ಯದ ಸಾಧ್ಯತೆಯನ್ನೇನು ಯೋಚಿಸದೆ ಶಂಕ್ರಜ್ಜ ಹೂಗುಟ್ಟೆಬಿಟ್ರು!




ಬೈಗಾಗಿತ್ತು, ರಾಮಣ್ಣ ಸಾಕಿದ್ದ ನಾಯಿ ಕರಿಯನ ಪಕ್ಕದಲ್ಲೇ ಕುರ್ಚಿ ಹಾಕಿ ಜಪಮಾಲೆ ಹಿಡಿದು ಕುಳಿತಿದ್ರು ಶಂಕ್ರಜ್ಜ.  ಸಂಧ್ಯಾವಂದನೆ, ವಿಷ್ಣು ಸಹಸ್ರನಾಮ, ರಾಮನಾಮ ಎಲ್ಲ ಮುಗಿಯೋ ಅಷ್ಟ್ರರಲ್ಲಿ ಕೆಂಪು ಮುಗಿಲು ಕಪ್ಪಾಗಿ ಕತ್ತಲು ತೀಕ್ಷವಾಗಿ ಹರಡಿತ್ತು. ಕರಿಯ ನಾಯಿ ಕಣ್ಣು ಮುಚ್ಚಿದ್ದರೆ ಅವನ ಇರುವಿಕೆಯೇ ಕಾಣದಷ್ಟು, ಕಣ್ಣು ಬಿಟ್ಟರೆ ಹೊಳೆಯುವ ಎರಡು ಗೋಲಿ ಗುರುತ್ವವನ್ನು ಮರೆತು ಗಾಳಿಯಲ್ಲಿ ತೇಲುವಂತೆ ಕಾಣುವ ಕತ್ತಲು. ಕರಿಯ ಹೆಸರಿಗೆ ತಕ್ಕ ಬಣ್ಣ. ಕತ್ತಲಲ್ಲಿ ಅವನ ಮೈ ಲೀನ!    

ಕತ್ತಲಾಗ್ತಿದ್ದಂತೆ ಉಂಡು ಮಲಗುವ ಅಭ್ಯಾಸ ಅಜ್ಜನದ್ದು. ಅವತ್ತು ಮನದ ಗಡಿಯಾರ ದಿಕ್ಕು ಕೊಟ್ಟಂತೆ ಊಟ ಮುಗಿಸಿ ಮಲಗಿದ್ದು ಆಯಿತು ಅಜ್ಜಯ್ಯ.

ರಾಮಣ್ಣ ಕೆಲಸ ಮುಗ್ಸಿ ಬಂದ್ರು, ಊಟಕ್ಕೆ ಹಾಕು ಅಂತ ಮಡದಿನ ಕೇಳಿದ್ರು.

"ಪುಟ್ಟಂದು ಊಟ ಆಗಿಲ್ಲ, ಕರೀತೀನಿ ಇರಿ" ಎಂದ ಮಡದಿ ಕೋಣೆಯ ಕಡೆ ಮಂಜುನ ಹುಡುಕ್ತ ಹೊರಟ್ಲು...

ಎಲ್ಲಿದ್ದ ಪುಟ್ಟ? ಹೋಗಿದ್ದ ಅಜ್ಜನ ಪಾಣಿಪಂಚೆ ಎತ್ಕೊಂಡು ತಪಸ್ಸು ಮಾಡೋಕೆ! ವರ ಪಡದು ಅಜ್ಜನ ಆಯಸ್ಸು ವೃದ್ಧಿಸೋಕೆ.  ಕಲ್ಯಾಣಸೇವೆ ಉತ್ತತ್ತಿ ಅಪ್ಪ ಕೇಳ್ದಾಗ ಕೊಡಿಸದ ಕಾರಣ ಅಜ್ಜನ ದೀರ್ಘಾಯಸ್ಸು ಅನಿವಾರ್ಯವಾಯ್ತಲ್ಲ!! 


                                                                                                ಮುಂದಿನದು  - ಚಿರಾಯು -2....

7 comments:

  1. Good one...Waiting for...nxt...continuity...

    ReplyDelete
  2. Super agide munde yenu agutte anta waiting

    ReplyDelete
  3. ತುಂಬಾ ಚೆನ್ನಾಗಿದೆ ರೋಹಿತ್, ಹೀಗೆ continue ಮಾಡುತ್ತಿರು ನಿನ್ನ ಹೆಸರು ಚಿರಾಯು ಆಗುವುದು ಖಂಡಿತಾ... 😊👌🏻

    ReplyDelete
  4. sbobet Casino - Win real money at thauberbet.com
    Get access to a world of casino wins with the leading sbobet ทางเข้า Online Casino in SA. Play over 2000's of video slots, table games and live 카지노 dealer games. 제왕카지노

    ReplyDelete