ಮೂಢ ಮನುಷ್ಯರು

Share:

                                                 ಮೂಢ ಮನುಷ್ಯರು


ರವಿವಾರ ಮುಂಜಾನೆ ಸುಮಾರು ಎಂಟು ಗಂಟೆ, ಮಂಡಿಯ ಮೇಲೆ ಪಂಚೆ ಎತ್ತಿ ಶಂಕರ್ ಟಿಫಿನ್ ಸೆಂಟರ್ ಮೇಜಿನ ಮೇಲೆ ಕುಳಿತಿದ್ದ ಕತ್ತೆಮರಿ ರಂಗ ಗಣೇಶ್ ಬೀಡಿ ಸೇದುತ್ತ, ಆರ್ಡರ್ ಮಾಡಿದ್ದ ಸ್ಟ್ರಾಂಗ್ ಕಾಫಿಗಾಗಿ ಕಾಯುತ್ತ ಕುಳಿತಿದ್ದ.


ರಂಗ ಹುಟ್ಟಿದ್ದ ದಿನ ಅವನ ತಾಯಿ ಸತ್ತಿದ್ದಳು. ಕಾಕತಾಳೀಯವೆಂಬಂತೆ, ಅವನಪ್ಪ ಸಾಕಿದ್ದ ಹೆಣ್ಣು ಕತ್ತೆಯು ಒಂದು ಪುಟ್ಟ ಗಂಡು ಕತ್ತೆಗೆ ಜನ್ಮ ನೀಡಿ ಸತ್ತಿತ್ತು. ರಂಗನ ಅಪ್ಪ ಗೋಪಾಲ ಕತ್ತೆಮರಿಯನ್ನೇ ಮುದ್ದಾಗಿ ಸಾಕಿ, ತನ್ನ ಮಗನನ್ನೇ ಬೀದಿಗೆ ಬಿಟ್ಟಿದ್ದ. ಬೆಳಿಗ್ಗೆ ದೋಬಿ ಕೆಲಸ ಮುಗಿಸಿ ಒಗೆದ ಬಟ್ಟೆಯನ್ನೆಲ್ಲ ತನ್ನ ಪುಟ್ಟ ಮಗನ ಮೇಲೆ ಹೊರಿಸಿ ಕತ್ತೆಯನ್ನು ಖಾಲಿ ಓಡಾಡಿಸಿ ಸುಖವಾಗಿಟ್ಟಿದ್ದನು. ಇದನ್ನು ಕಂಡ ಊರ ಜನರೆಲ್ಲ ಕತ್ತೆಮರಿಯೇ ಗೋಪಾಲನ ಮಗನೆಂದೂ, ರಂಗನೇ ಬಟ್ಟೆ ಹೊರುವ ಕತ್ತೆಮರಿಯೆಂದೂ ವ್ಯಂಗ್ಯೋಕ್ತಿಗಳನ್ನು ಹೇಳಿ ಹೇಳಿ, ರಂಗನ ಹೆಸರೇ ಮರೆತು ಕತ್ತೆಮರಿಯೆಂದೇ ಪ್ರಸಿದ್ದಿ ಮಾಡಿದ್ದರು. ರಂಗನಿಗೆ ಇಂದು ಸುಮಾರು ಐವತ್ತೈದು ವರ್ಷ. ಅವನ ತಲೆಹರಟೆ ಸ್ವಭಾವವು ಒಂದು ಕಾರಣ ಆತನ ಕತ್ತೆಮರಿ ಹೆಸರು ಅಷ್ಟು ವರ್ಷ ಚಾಲತಿಯಲ್ಲಿ ಉಳಿದುಕೊಳ್ಳಲು


ನಗರದ ಮೋಜು ಮಸ್ತಿ ಗಳನ್ನೂ ಮೈಗೆ ಹಚ್ಚಿಕೊಂಡಿದ್ದ ಕನಕಪುರದ ಜನ ಭಾನುವಾರ ರಜಾಚರಣೆಯಲ್ಲಿ ತೊಡಗಿದ್ದಕ್ಕೆ ರಸ್ತೆಯಲ್ಲಿ ಜನರೇ ಇರಲಿಲ್ಲ. ಕಾರಣಕ್ಕೆ ಜನರನ್ನು ಶಪಿಸುತ್ತ ಕಾಫೀ ಕಾಯಿಸುತ್ತಿದ್ದ ರಾಘವೇಂದ್ರ ಅಡಿಗ. ಈತನ ಶಂಕರ್ ಟಿಫನ್ ಸೆಂಟೆರೇ ಕತ್ತೆಮರಿಯಂಥ ತಲಹರಟೆಗಳಿಗೆ ಸಮಯ ಕಳೆಯುವ ಅಡ್ಡವಾಗಿ ಹೋಗಿತ್ತು.


 "ರಾಘಣ್ಣ ತಿಂಡಿಗೆ ಏನು ಇವತ್ತು?" ಆಟೋ ಇಳಿದು ಬಂದ ಯುವಕ ಪ್ರಶ್ನಿಸಿದ್ದ.


ಯುವಕನನ್ನು ಡಾಮ ಸತೀಶನೆಂದು ಗುರುತಿಸಿ "ಇವತ್ತು ಭಾನುವಾರ, ತರ್ಕಾರಿ ಪಲಾವ್" ಮಾಲೀಕ ರಾಘವೇಂದ್ರ ಅಡಿಗರು ಉತ್ತರಿಸುವ ಮುನ್ನವೇ ಕತ್ತೆಮರಿ ಉತ್ತರಿಸಿದ್ದ. ಈತ ಅರ್ಧಾಯುಸ್ಸನ್ನು ಕ್ಯಾಂಟೀನಿನನ್ನಿಯೇ ಕಳೆದು ಕಳೆದು ಅದರ ದಿನಚರಿಯ ಕ್ರಮವೆಲ್ಲವು ತಿಳಿದು ಹೋಗಿತ್ತು.


ಸತೀಶ ಮಧ್ಯವಯಸ್ಕ, ಮದುವೆಯಾಗಿ ಸುಮಾರು ಎರಡು ವರ್ಷ. ಸ್ಥೂಲಕಾಯನಾದ ಅವನ ತಂದೆಯು ದಿಢೀರ್ ಸತ್ತ ಕಾರಣ ತಂದೆಯ ಆಟೋವಿನ ಜೊತೆಗೆ ಅಡ್ಡೆಸರು ಅವನಿಗೆ ಸೇರಿಕೊಂಡಿತ್ತು. ಡಾಮನ ಮಗನಿಗೆ ಹೊಸದೊಂದು ಹೆಸರು ಇಡುವ ಸೃಜನಶೀಲತೆಯ ಕೊರತೆಯಿಂದಾಗಿ ಡಾಮನೆಂದೇ ಆಟೋ ಚಾಲಕರೆಲ್ಲ ಸತೀಶನನ್ನು ಕರೆದಿದ್ದದ್ದು.


ಹಾಫ್ ಪ್ಲೇಟ್ ಕೊಡಿ ಭಟ್ರೇ ಪಲಾವ್”


"ಅಲ್ಲ ಮಾರಾಯ, ಜನ ನಿನ್ನ ಡಾಮಾ ಅಂತ ಕರೆಯೋಕಾದ್ರೂ ನಿನ್ ತಿಂದು ದಪ್ಪ ಆಗಿ ನಿಮ್ ಅಪ್ಪನ್ ಹೆಸರು ಉಳಿಸಬಾರದ. ಒಂದು ಹಾಕ್ತಿನ್ ಬಿಡು"  


"ಸ್ಲಿಮ್ ಆಗಿರ್ಬೇಕು ಭಟ್ರೆ, ಅರ್ಧ ಕೊಡಿ ಸಾಕು"


ಅಷ್ಟೊತ್ತಿಗೆ ಆರ್ಡರ್ ಮಾಡಿದ್ದ ಸ್ಟ್ರಾಂಗ್ ಕಾಫೀಯು ಕತ್ತೆಮರಿಯ ಕೈ ಸೇರಿತ್ತು. ಕಾಫೀ ಮೈ ಸೇರಿ ಬುದ್ಧಿ ಚುರುಕಾಗಿ ತನ್ನ ತಲೆಹರಟೆ ತನಿಖೆ ಶುರು ಮಾಡಿದ.


"ಭಟ್ರೆ, ಆ ಕುದುರೆ ಗೌಡಂದು, ತಿಥಿ ಅಂತೇ ಸತ್ಯನ? ಅವನ್ ಮಗ ಬಂದು ಕಾರ್ಡ್ ಕೊಟ್ಟ?"


"ಹೂ, ಫಾರೆಸ್ಟ್ ಡೆಪ್ತ್ ಅವ್ರು ಹೇಳುದ್ರನಂತೆ, ಯಾವ್ದೋ ಚಿರತೆ ಬಾಯಿಗೆ ಸಿಕ್ಕಿದ್ದಾರೆ, ಬಾಡಿ ಸಿಗೋದು ಡೌಟು ಅಂತ. ಬಾಡಿ ಇಲ್ಲ ಅಂದ್ರೇನು ತಿಥಿ ಆದ್ರೂ ಮಾಡಿ ಪೂರೈಸುವ ಅಂತ ಮಾಡುಸ್ತಾವ್ರೆ"


ಕನಕಪುರದಿಂದ ಸುಮಾರು ಹತ್ತು ಮೈಲಿ ದೂರದ ಸುಂಡಗಟ್ಟವು ಕಾಡಿನ ಅಂಚಿನ ಊರು. ಅಲ್ಲಿಂದ ಶುರುವಾಗುವ ಕಾಡು ಓತಪ್ರೋತವಾಗಿ ಮಹದೇಶ್ವರ ಸ್ವಾಮಿ ಬೆಟ್ಟವನ್ನು, ತಮಿಳುನಾಡನ್ನು ಕೇರಳದ ಗಡಿಯನ್ನು ಸೇರಿಸಿ ಹರಡಿದೆ. ಈ ಸುಂಡಘಟ್ಟದಲ್ಲಿ ಈಗಲೂ ಕುದುರೆಯಲ್ಲಿ ಓಡಾಡುವ ಮುದುಕನೊಬ್ಬ ಇಪ್ಪತ್ತು ದಿನದಿಂದ ಕಾಡಿನಲ್ಲಿ ಕಾಣೆಯಾಗಲು, ಅವನು ಸತ್ತಿದ್ದಾನೆಂದು ಫಾರೆಸ್ಟ್ ಡಿಪಾರ್ಟ್ಮೆಂಟ್ ಕೇಸ್ ಕ್ಲೋಸ್ ಮಾಡಿದ್ದರು.   


ಕಥೆಯು ಕತ್ತೆಮರಿಯಂತಹ ತಲಹರಟೆಯವರಿಗೆ ತೀಟೆ ತೀರಿಸಿಕೊಳ್ಳುವ ಮದ್ದಾಗಿ ಹೋಗಿತ್ತು.


"ಸಂಸ್ಕಾರಾನೇ ಮಾಡದೇ, ಯಾವ ತಿಥಿ ಬಿಡಿ. ಹೆಣ ಸಿಕ್ದೆ ತಿಥಿ ಮಾಡ್ತಾವ್ರೆ? ಇದಕ್ಕಿಂತ ಕೇಡ್ಗಾಲ ಇನ್ನೇನಾರ ಆಗ್ಬೈದಾ? " ಎಂದ ಕತ್ತೆಮರಿ.


ಎಲ್ಲವನ್ನು ಆಲಿಸುತ್ತ ಕುಳಿತಿದ್ದ ಡಾಮ, ತನಗೆ ಗೊತ್ತಿದ್ದ ಗುಟ್ಟೊಂದನ್ನು ಹೇಳ ಹೊರಟಿದ್ದ!


"ರೀ ಸ್ವಾಮಿ, ನಾನು ಒಂದು ವಿಷ್ಯ ಹೇಳ್ತಿನಿ. ಎಲ್ಲಾದ್ರೂ ಬಾಯಿ ಬಿಟ್ಟೀರ!"


"ಅದೇನ್ ಹೇಳು ಡಾಮ, ನಾನು ಗೊತ್ತಲ್ಲ, ಬೇರೆಲ್ಲೂ ಉಸ್ರಾಡಲ್ಲ, ಮಾತು ಅಂದ್ರೆ ಮಾತು ನನ್ ಹತ್ರ!" ಉತ್ತರಿಸಿದ್ದ ಕತ್ತೆಮರಿ.


ಕತ್ತೆ ಮರಿಯ ತರಲೆ ಸ್ವಭಾವ ತಿಳಿದಿರದ ವಿಷಯವಾದರೂ ಆಶ್ವಾಸನೆ ಸಿಕ್ಕುತ್ತಲೇ ಡಾಮ ತನಗೆ ಗೊತ್ತಿದ್ದ ಮಾಯಾಬಜಾರಿನ ಕಥೆ ಶುರು ಮಾಡಿದ್ದ.


" ಕುದುರೆ ಗೌಡಂಗೆ ಹೆಂಡತಿ ಕಾಟ ಕೊಡ್ತಿದ್ಳಂತೆ! ಅದೇ ಕಾರಣಕ್ಕೆ ಅವನು ಕಾಡಿಗೆ ಹೋದ್ರೆ ಎಷ್ಟೋ ದಿನ ಬರ್ತಾ ಇರ್ಲಿಲ್ಲ. ನಿಮಗೆ ಗೊತ್ತಲ್ಲ ಸ್ವಾಮಿ ಅದೊಂದು ಸಪ್ಪು! ಸಪ್ಪು ತಿಂದ್ರೆ ಮನ್ಸ ಮಾಯಾ! ಅದೇ ಸಪ್ಪು ತಿಂದು, ಹೆಂಡ್ತಿ ನು ಬೇಡ ಊರು ಬೇಡ ಅಂತ ಬಿಟ್ಟೋಗಿದ್ದು ಕುದುರೆ ಗೌಡ."


ಇದನ್ನು ಕೇಳುತ್ತಾ ನಿಬ್ಬೆರಗಾಗಿ ಹೋದರು ರಾಘಣ್ಣ ಮತ್ತು ಕತ್ತೆಮರಿ!


"ಲೇ ನಿನ್ ಹೇಳೋದ್ ನಿಜ ಅಲ್ಲ ಬಿಡೋ. ಫಾರೆಸ್ಟ್ ಡಿಪಾರ್ಟ್ಮೆಂಟ್ ಅವ್ರೆ ಹೇಳುದ್ರಂತೆ ಮಟ್ಕಾ ಹೊತ್ಕೊಂಡ್ ಹೊಯ್ತು ಅಂತ?"


"ಸ್ವಾಮಿ, ನನ್ನ ಬಾಮೈದ ಪುಂಗಿ ನಾಗ, ಇದೆ ಫಾರೆಸ್ಟ್  ಪೊಲೀಸರಿಗೆ ಕೆಲಸ ಮಾಡಲ್ವಾ? ಅವನೇ ಕಣ್ಣಾರೆ ನೋಡಿದ್ ಹೇಳಿದ್ದು. ಕುದುರೆ ಮೇಲೆ ಕುಂತು ಕಾಡಿಗೆ ಒಂಟ್ನಂತೆ. ಒಂದು ಮರದ್ ತಾವು ಸಪ್ಪು ಕೀಳ್ತಾ ನಿಂತಿದ್ನಂತೆ. ಎರಡೇ ಕ್ಷಣಕ್ಕೆ ಮಾಯಾ. ಕುದುರೆ ಖಾಲಿ ವಾಪಾಸ್ ಬಂತಂತೆ. ಮಾಯಾ ಆದೋನು ಮೇಲೆ ಕುಂತಿದ್ರೆ ಕಾಣ್ತಾನಾ? ನೀವೇ ಹೇಳಿ?"


"ಲೋ, ಮಂಕ್ ಹಿಡುಸ್ತಾ ಇದ್ದೀಯ ನಮಗೆ? ಕಥೆ ಹೇಳ್ಬೇಡ ಹೋಗು ಮಾರಾಯ! ಹಿ ಹಿ ಹಿ ಹಿ, ಸೊಪ್ಪಂತೆ, ಮಾಯ ಅಂತೆ ಖಾಲಿ ಕುದುರೆ ಅಂತೆ!" ನಗುತ್ತ ಹೇಳಿದ್ದ ಕತ್ತೆಮರಿ


"ಸ್ವಾಮಿ ನೀವೇನ್ ಹಿಂಗ್ ಹೇಳ್ಬಿಟ್ರಿ? ವೀರಪ್ಪನ್ ಅಷ್ಟ್ ವರ್ಷ ಆಟ ಆಡಿಸ್ಕೊಂಡು ಹೆಂಗ್ ಇದ್ದ ಕಾಡಲ್ಲಿ? ಇದೇ ಸೊಪ್ಪು ಅಲ್ವೇ!"


ಸುಮಾರು ಇಪ್ಪತ್ತು ವರ್ಷಗಳ ಹಿಂದೆ, ವೀರಪ್ಪನ್ ಕಾಡಿನಲ್ಲಿ ಅವಿತು ಬರೋಬರಿ ಮೂವತ್ತೆಂಟು ವರ್ಷ ದರ್ಬಾರು ಮಾಡಿದ್ದ. ಆತ ಮೂರೂ ರಾಜ್ಯಕ್ಕೆ ಚಳ್ಳೆ ಹಣ್ಣು ತಿನ್ನಿಸಿ ಅಷ್ಟು ವರ್ಷ ಬದುಕಿರಬೇಕಾದರೆ ಎಂಥದೋ ಶಕ್ತಿ ಅವನನ್ನು ಕಾದಿತ್ತು ಎನ್ನುವುದು ಇವನ ನಂಬಿಕೆ. ಅಂತಹ ನಂಬಿಕೆಗಳಲ್ಲಿ ಒಂದು ಮಾಯಾ ಸಪ್ಪು. ಇದನ್ನು ತಿಂದೆ ವೀರಪ್ಪನ್ ಮಾಯವಾಗಿ ಎಲ್ಲರಿಂದ ತಪ್ಪಿಸಿಕೊಂಡು ಅಷ್ಟು ಕಾಲವಿದ್ದ ಎಂಬುದು.


"ಹೌದು ಹೌದು, ನಾನು ಕೇಳಿದ್ದೀನಿ! ಆದ್ರೂ ಇವಾಗ ಅದು ನಂಬೋ ಹಂಗಿಲ್ಲ ಬಿಡೋ ಡಾಮ! ಅದು ನಮ್ ಸುಂಡಗಟ್ಟದಲ್ಲಿ?"


ಇವರೆಲ್ಲರಿಗಿಂತಲೂ ಸ್ವಲ್ಪ ಪ್ರಾಯೋಗಿಕವಾಗಿ ಚಿಂತಿಸುವ ರಾಘವೇಂದ್ರ ಅಡಿಗರು, ಎಲ್ಲದನ್ನು ನೋಡುತ್ತಾ ಹಾಸ್ಯಾಸ್ಪದವೆನಿಸಿ ತಮ್ಮ ಕೆಲಸದಲ್ಲಿ ತೊಡಗಿದಂತೆ ನಟಿಸಿ ತಳವಿರದ ಮೂಢ ಕಥೆಯನ್ನು ಆಲಿಸುತ್ತ ನಗುತ್ತಾ ಕುಳಿತಿದ್ದರು.


"ಇವಾಗೇನು, ನಮ್ ಪುಂಗಿನೇ ಕರುಸ್ತೀನಿ, ಅವ್ನೆ ಕಣ್ಣಾರೆ ನೋಡಿರೋ ಮನ್ಸ. ಎಲ್ಲ ಕೇಳ್ಕೊಳಿ!"


"ಹಾಲೋ, ನಾಗ ನಾನಪ್ಪ ನಿಮ್ ಭಾವ. ಎಲ್ಲಿದೀಯ? ರಪ್ನೆ ಶಂಕರ್ ಟಿಫನ್ ಸೆಂಟರ್ ಗೆ ಬಂದ್ ಹೋಗು. ಹೂ ಸರಿ" ಎನ್ನುತ್ತಾ ಕರೆ ಕಡಿತಗೊಳಿಸುವಷ್ಟರಲ್ಲೇ ನಾಗನ ಬೈಕ್ ಕ್ಯಾಂಟೀನಿನ ಆಚೆ ಬಂದು ನಿಂತಿತ್ತು.


ನಾಗ, ಈತ ಎರಡನೇ ಕ್ಲಾಸ್ ಇದ್ದಾಗಲೇ ಗೋಧಿ ನಾಗರವನ್ನು ಹಿಡಿದು ದೈರ್ಯವಂತನೆಂಬ ಕೀರ್ತಿ ಗಳಿಸಿ ಪುಂಗಿ ನಾಗನಾಗಿ ಸುತ್ತ ಊರಿನಲ್ಲಿ ತೇರ್ಗಡೆ ಹೊಂದಿದ್ದ! ಈತನ ಕೌಶಲ್ಯ ಗುರುತಿಸಿ, ಫಾರೆಸ್ಟ್ ಆಫೀಸರ್ಸ್ ಕಾಡು ಪ್ರಾಣಿಗಳ ರಕ್ಷಣೆಗಾಗಿ ಅವನನ್ನು ನೇಮಿಸಿಕೊಂಡಿದ್ದರು. ಸರ್ಕಾರದ ಕೆಲವು ಪ್ರಾಣಿ ಸಂಗ್ರಹಾಲಯಕ್ಕೆ ಅಪರೂಪದ ಹಾವುಗಳನ್ನು ಹಿಡಿದು ಕೊಟ್ಟಿದ್ದ ಪುಂಗಿ ನಾಗ.


"ಏನ್ ಮಾಮ್ಸ್ ಒಬ್ನೇ ತಿಂತಿದ್ಯಾ, ಭಾಮೈದನ ಕರ್ದು ತಿಂಡಿ ಗಿಂಡಿ ಕೊಡ್ಸಲ್ವ?" ತನ್ನ ಭಾವನನ್ನು ನೋಡುತ್ತಾ ಹೇಳಿದ್ದ ಪುಂಗಿ.


"ಅದಿರ್ಲಿ, ನೋಡು ಗುರು ಇವ್ರಿಗೆ ನಮ್ ಕುದುರೆ ಗೌಡನ ಮಿಸ್ಟ್ರಿ ಹೇಳುದ್ರೆ ನಂಬಂಗೆ ಇಲ್ಲ!"


"ಸ್ವಾಮಿ ನಾನೆ ನೋಡಿದ್ದೀನ್ ರೀ ಇನ್ನೇನ್ ಸಾಕ್ಷಿ ಬೇಕು ನಿಮಗೆ?" ಕತ್ತೆಮರಿಯತ್ತ ನೋಡುತ್ತಾ ಹೇಳಿದ ಪುಂಗಿ.


"ನಿನ್ ನೋಡಿದ್ದ ನಂಗೂ ತೋರಿಸಿಬಿಡಪ್ಪಾ, ಒಪ್ತಿನ್ ನಿನ್ ಮಾತ್ನ!" ಎಂದ ಕತ್ತೆಮರಿ.


"ಸ್ವಾಮಿ, ನಾಳೆ ಕುದುರೆ ಗೌಡಂದು ತಿಥಿ. ನೀವು ಬರ್ತೀರಾ ಅಲ್ವೇ? ಬನ್ನಿ, ಎಲ್ಲರು ಊಟ ಮಾಡ್ಕೊಳೋಣ, ಸಂಜೆ ಫಾರೆಸ್ಟ್ ಡಿಪಾರ್ಟ್ಮೆಂಟ್ ಅವ್ರು ಬೇಗ ಹೋಗ್ತಾರೆ, ನಾನು ನಮ್ ಭಾವಂಗೆ ಸಿಗ್ನಲ್ ಕೊಡ್ತೀನಿ. ನೀವು ಆಟೋ ಹತ್ತಿ, ಕಾಡಿಗೆ ಹೋಗುವ. ಮರ ತೋರಿಸ್ತಿನಿ, ಪರೀಕ್ಸೆ ಮಾಡ್ಕೊಳ್ಳಿ" ಎಂದ ಪುಂಗಿ ನಾಗ.


ಅಷ್ಟರಲ್ಲಿ ಹೋಟೆಲಿಗೆ ಇಬ್ಬರು ಗಿರಾಕಿಗಳ ಆಗಮನವಾಗಿತ್ತು, ಡುಪ್ಲೆಕ್ಸ್ ಗೌಡ ಮತ್ತವನ ಸ್ನೇಹಿತ ಅಟ್ಟೆಕಾಲು ಸತ್ಯ. ಸುಂಡಗಟ್ಟಕ್ಕೆ ಹೋಗುವ ದಾರಿ ಮಧ್ಯದಲ್ಲಿ ಸಿಗುವ ಹಳ್ಳಿ ಇವರದು. ಸುತ್ತ ಹತ್ತಳ್ಳಿಗೆ ಮೊದಲು ಬಾರಿ ಡುಪ್ಲೆಕ್ಸ್ ಮನೆ ಕಟ್ಟಿಸಿದ ಕೀರ್ತಿಗಾಗಿ ಆತನಿಗೆ ಡುಪ್ಲೆಕ್ಸ್ ಗೌಡನೆಂದು, ಸೊಟ್ಟಗಿನ ಕಾಲು ಹೊಂದಿದ್ದ ಸತ್ಯ ವಿಚಿತ್ರವಾಗಿ ನಡೆಯುವುದನ್ನು ಕಂಡು ಅಟ್ಟೆಕಾಲು ಸತ್ಯನೆಂದು ಇವರಿಗೆ ಸುತ್ತುರಿನಲ್ಲೂ ನಾಮಕರಣವಾಗಿತ್ತು.


"ಹೋ, ಕಾಡಿಗೆ ಹೋಗೋ ಮಾತಾಗ್ತಿದೆ, ಏನ್ ಸಮಾಚಾರ?" ಬೇಟೆಯ ಹುಚ್ಚು ಮೈಗೆ ಅಂಟಿಸಿಕೊಂಡಿದ್ದ ಡುಪ್ಲೆಕ್ಸ್ ಗೌಡನ ಕಿವಿ ಕಾಡು ಪದ ಕೇಳಿದ ಕೂಡಲೇ ನಿಮಿರಿ ಮಾತನಾಡಿಸಿತ್ತು.   


ಬೆಳಗಿಂದಲೂ ನಡೆದ ಸಂಭಾಷಣೆಯ ನಿರೂಪಣೆ ಕತ್ತೆಮರಿ ಡುಪ್ಲೆಕ್ಸ್ ಗೌಡನಿಗೆ ಮಾಡಿದ್ದ. ಅದಕ್ಕೆ ಗೌಡ "ನೀವು ಸೊಪ್ಪಾದ್ರೂ ಹುಡ್ಕಿ, ಮರ ಆದ್ರೂ ಬೆಳ್ಸಿ, ನಾನು ಸತ್ಯ ಬತ್ತೀವಿ, ಒಂದ್ ಕಾಡ್ ಹಂದಿ ಹುಡ್ಕಿ ಅಷ್ಟೇ!" ಎಂದಿದ್ದ.


ಎಲ್ಲರು ಮರುದಿನ ಕುದುರೆ ಗೌಡ, ಮಾಯವಾಗುವ ಸಪ್ಪು ತಿಂದು ಕಾಡಿನಲ್ಲೇ ಇನ್ನು ಬದುಕಿದ್ದಾನೆಂದು ಸಾಬೀತು ಮಾಡಲು ಅವನದ್ದೇ ತಿಥಿಯ ಊಟ ಮುಗಿಸಿ ಹೊರಡಲು ಯೋಜನೆ ರೂಪಿಸಿದರು!


ಮರುದಿನ ಅಂದುಕೊಂಡಂತೆ ಎಲ್ಲರು ಮದ್ಯಾಹ್ನದೊತ್ತಿಗೆ ತಿಥಿಯ ಊಟಕ್ಕೆ ಕುಳಿತಿದ್ದರು. ಕತ್ತೆಮರಿ, ಡುಪ್ಲೆಕ್ಸ್ ಗೌಡ, ಅಟ್ಟೆ ಕಾಲ್ ಸತ್ಯ ಮತ್ತು ಡಾಮ ಸತೀಶ. ಪುಂಗಿ ನಾಗ ತನಗೇನೋ ಹಾವು ಹಿಡಿಯಲು ಕರೆ ಬಂದಿದೆಯೆಂದು, ಫಾರೆಸ್ಟ್ ಆಫೀಸರ್ ಹೊರಡುವ ಹೊತ್ತಿಗೆ ಕರೆ ಮಾಡುವುದಾಗಿಯೂ ತನ್ನ ಭಾವನಿಗೆ ತಿಳಿಸಿದ್ದ


ಅಂದು ಬೆಳಿಗ್ಗೆ ತಾನೇ ಇಳಿಸಿದ್ದ ಕಳ್ಳು ಕೂಡ ಬಂದಿತ್ತು. ಊಟ ಮುಗಿಸಿ, ಎಲ್ಲರು ಕುಡಿದು, ಪುಂಗಿ ಕರೆ ಮಾಡುವ ತನಕ ಡಾಮನ ಮನೆಯ ಪಟಸಾಲೆಯ ಮೇಲೆ ಜೂಜಾಡುತ್ತ ಕುಳಿತರು. ಕಳ್ಳು ಕಚ್ಛಾವಾದ್ದರಿಂದ ಎಲ್ಲರಿಗು ಮತ್ತಿನ ರಂಗೇರಿತ್ತು. ಸ್ವಲ್ಪ ಹೊತ್ತಿನ ಬಳಿಕ ಪುಂಗಿ ನಾಗನು ಬಂದು ಅಲ್ಲಿಗೇ ಸೇರಿದ್ದ. ಆಫೀಸರ್ ಹೊರಡುವ ಸಮಯಕ್ಕೆ ಅವರ ಡ್ರೈವರ್ ಕರೆ ಮಾಡಿ ವಿಷಯ ತಿಳಿಸುತ್ತಾನೆಂದು, ಅವನ ಕರೆ ಬಂದ ನಂತರ ಹೊರಡುವುದೆಂದು ಹೇಳಿದ್ದ.


"ಎಂಥ ಹಾವು ಅಂತೀರಾ. ಎಂಟಡಿ ಉದ್ದ, ಕರಿ ನಾಗರ!" ತಾನು ಆಗ ತಾನೇ ಹಿಡಿದು ತಂದಿದ್ದ ನಾಗರಹಾವಿನ ಕಥೆಯನ್ನು ಮತ್ತಿನಲ್ಲಿ ಒದರುತ್ತಿದ್ದ ಪುಂಗಿ ನಾಗ.


ಸಂಜೆ ಸುಮಾರು ನಾಲ್ಕೂವರೆ ಪುಂಗಿಗೆ ಕರೆ ಬಂದು, ಎಲ್ಲರು ಹೊರಡಲು ಸಿದ್ದರಾದರು. ಪುಂಗಿ ಮತ್ತು ಡಾಮನಿಗೆ ತಾವು ಹೇಳಿದ ಕಥೆ ಸಾಬೀತು ಪಡಿಸುವ ತವಕ, ಕತ್ತೆಮರಿಗೆ ಮಾಯವಾಗುವ ಸಪ್ಪಿನ ಚಿಂತೆ, ಅಟ್ಟೆಕಾಲ್ ಸತ್ಯನಿಗೆ ಮತ್ತು ಡುಪ್ಲೆಕ್ಸ್ ಗೌಡ್ರಿಗೆ ಹಂದಿ ಬೇಟೆಯ ಕುತೂಹಲ. ಎಲ್ಲರು ಆಟೋ ಹತ್ತಿ ಹೊರಟಿದ್ದರು. ಸತ್ಯ ಮತ್ತು ಡುಪ್ಲೆಕ್ಸ್ ಗೌಡ್ರು ಇಬ್ಬರು ಬೇಟೆಗಾಗಿ ತಲಾ ಒಂದೊಂದು ಬಂದೂಕನ್ನು ಸಿದ್ಧ ಮಾಡಿದ್ದರು.


ಆಟೋ ಹತ್ತಿ ಎಲ್ಲರು ನೆಲೆಗೊಂಡರು. ಮುಂದೆ ಡಾಮ ಮತ್ತು ಬಂದೂಕು ಹಿಡಿದ ಪುಂಗಿ ನಾಗ. ಹಿಂದೆ ಸತ್ಯ, ಬಂದೂಕಿನೊಂದಿಗೆ ಡುಪ್ಲೆಕ್ಸ್ ಹಾಗು ಕತ್ತೆಮರಿ. ಇವರ ಸವಾರಿ ಕಾಡಿಗೆ ಹೊರಟಿತ್ತು


ಕಾಡಿಗೆ ಪ್ರವೇಶವಾಗುತ್ತಿದಂತೆಯೇ, ಸಂಜೆಯ ಹೊಂಬಿಸಿಲು ಕಗ್ಗಾಡಿನ ಮೇಲೆ ಬಿದ್ದಿರುವ ದೃಶ್ಯ.. ಸಂಜೆ ಸುಮಾರು ಐದಾಗಿತ್ತು. ಎಲ್ಲರ ಕಣ್ಣು ಕುಡಿದ ಕಳ್ಳಿನ ಮತ್ತಿನಲ್ಲಿ ಮಂಜು ಮಂಜು. ಪುಂಗಿಯ ಪ್ರಕಾರ ಮಣ್ಣು ದಾರಿಯಲ್ಲಿ ಎರಡು ಗುಡ್ಡ ಇಳಿಸಿದ ನಂತರ ಸುಮಾರು ನಡೆದರೆ ಮರವಿರುವ ಪುಟ್ಟ ಹಳ್ಳ ಸಿಗುತ್ತದೆ.


ಆಟೋ ಮೊದಲನೇ ಗುಡ್ಡ ಹತ್ತಿತ್ತು. ಕುಡಿದ ಕಾರಣ ಡಾಮ ಹಾವು ಹರಿಯುವಂತೆ ಆಟೋ ಬಿಟ್ಟಿದ್ದ. ಗುಡ್ಡ ಇಳಿಸುವಾಗ ಒಮ್ಮೆಲೇ ಆಟೋ ನಿಯಂತ್ರಣ ತಪ್ಪಿ ಅಡ್ಡ ದಿಡ್ಡಿ ಹೋಗಲು, ಹೇಗೋ ಡಾಮ ನಿಯಂತ್ರಿಸಿ ಮುನ್ನಡೆಸಿದ


ಎರೆಡನೆ ಗುಡ್ಡ ಮೊದಲನೆಯದಕ್ಕಿಂತ ದೊಡ್ಡದು. ದುಪ್ಪಟ್ಟೆ ಇರಬಹುದು. ಆಟೋ ಎರೆಡನೆ ಗೇರಿನಲ್ಲೇ ಅಳುತ್ತ ಹುಸ್ಸೋ ಹುಸ್ಸೋ ಎನ್ನುತ್ತಾ ಗುಡ್ಡ ಹತ್ತಿತ್ತು. ತುದಿ ತಲುಪುವಲ್ಲಿಗೆ ಅಳತೆ ಮೀರಿ ಆಕ್ಸಿಲರೇಟರ್ ಕೊಟ್ಟಿದ್ದ ಡಾಮ, ಬೋರೆಯಲ್ಲಿ ವೇಗವಾಗಿ ನುಗ್ಗಿದ ಆಟೋ ನಿಯಂತ್ರಣ ತಪ್ಪಿ ಒಂದೆರಡು ಹಳ್ಳದಲ್ಲಿ ಹಾರಿ, ಬೋರೆಯ ತುದಿಯಲ್ಲಿನ ಮರಕ್ಕೆ ಡಿಕ್ಕಿ ಹೊಡೆದಿತ್ತು. ಡಿಕ್ಕಿ ಹೊಡೆದ ತಕ್ಷಣ ಬಂದೂಕು ಚಲಿಸಿದ ಶಬ್ದವು ಕಾಡಿನೆಲ್ಲೆಡೆ ಪಸರಿಸಿ ಹಕ್ಕಿ ಪಕ್ಷಿಗಳನ್ನು ಸ್ಥಬ್ಧವನ್ನಾಗಿ ಮಾಡಿತ್ತು! ಇಳಿದು ಎಲ್ಲರು ನೋಡುತ್ತಾರೆ, ಪುಂಗಿ ನಾಗನ ತಲೆ ಸೀಳಿಕೊಂಡು ರಕ್ತವೆಲ್ಲ ಚಿಮ್ಮಿದೆ. ಒಂದು ಸದ್ದಿರಲಿ, ಒಸರಲು ಸಮಯವಿರದೆ ಸತ್ತಿದ್ದ ನಾಗ. ಗಡ್ಡದಿಂದ ನುಗ್ಗಿದ್ದ ಗುಂಡು ರುಂಡವನ್ನು ಸೀಳಿ ತಲೆಯ ನೆತ್ತಿಯಿಂದ ಆಚೆ ಬಂದು, ಹಸಿ ಮಾಂಸವನ್ನು ಸುತ್ತಲೂ ಚೆಲ್ಲಾಡಿತ್ತು.


ಟ್ರಿಗರ್ ನಲ್ಲಿ ಬೆರಳಿಟ್ಟು ಬಂದೂಕ ಹಿಡಿದಿದ್ದ ಕಾರಣ ಮರಕ್ಕೆ ಆಟೋ ಗುದ್ದಿದ್ದ ಗಾಬರಿಗೆ ತಾನೇ ತನ್ನ ಮೇಲೆ ಬಂದೂಕು ಚಲಾಯಿಸಿಕೊಂಡು ಸತ್ತು ಬಿದ್ದಿದ್ದ ಪುಂಗಿ ನಾಗ! ಅವನು ನಿರೂಪಿಸಿದ್ದ ಮಾಯಾ ಮಾಡುವ ಮರದ ಕಥೆ ಅವನೊಂದಿಗೆ ಅಸ್ತಂಗತವಾಗಿತ್ತು.

5 comments:

  1. ಅಯ್ಯೋ ಪಾಪ ಪುಂಗಿ ಹೋಗೆ ಹಾಕೊಂಡ.....ಕತ್ತೆಮರಿ ಇದೆ ಯೋಚನೆ ಅಲ್ಲೇ ದಿನ ಕಳಿತಾನೆ.....

    ReplyDelete
  2. What an Unexpected ending😂

    ReplyDelete
  3. This comment has been removed by the author.

    ReplyDelete
    Replies
    1. ಸೂಪರ್ ಕತೆ, ಕನಕಪುರ locality ಅಲ್ಲಿ ಆಟೋ use ಮಾಡಿರೋದು ಚೆನ್ನಾಗಿತ್ತು. ಪಾತ್ರಗಳ introduction ಮತ್ತೆ story line ಎಳ್ಳು ಲಾಗ್ ಆಗಿಲ್ಲ. Unexpected climax but ಚೆನ್ನಗಿದೆ. ತೇಜಸ್ವಿ ಅವರ influence ಕಾಣುತ್ತೆ😊. Keep writing

      Delete
  4. ಕೊನೆಗೂ ಕಾಡಿನ ಮಾಯಾ qಸೊಪ್ಪು ಸಿಗಲೇ ಇಲ್ಲ..😅👌👌

    ReplyDelete