ಭಾಗ 6. ಕಪೋಲ ಕಲ್ಪಿತ| ರೇಲಿ ಬೈಸಿಕಲ್ಲು!

Share:

ರೇಲಿ ಬೈಸಿಕಲ್ಲು!



ಭಾಗ 6ಕಪೋಲ ಕಲ್ಪಿತ
  
ಒಂದು ಕಡೆ ಕೊಲೆಗೆ ಕಾರಣ ತಾನಾಗಲಿ, ಪುಟ್ಟುವಾಗಲಿ ಆಗಿರಬಾರದೆಂಬ ಚಿಂತೆ ಜನ್ನನಲ್ಲಿ. ಇನ್ನೊಂದು ಕಡೆ ಮೋಟಿವ್, ಟೈಮ್ ಲೈನ್, ಎವಿಡೆನ್ಸ್ ಎಂದು ತಲೆ ಕೆಡಿಸಿಕೊಂಡಿರುವ ಎಸ್ ಐ  ನಟರಾಜು. ಇವೆರೆಡರ ನಡುವೆ ತನ್ನಪ್ಪನ ತಿಥಿಗೂ ಉಳಿಯದೆ ಖೂನಿಯಾದ ಮಗ ಹರಿ.




ಸ್ಟೇಷನ್ ಭೇಟಿಯ ನಂತರ ಜನ್ನ ತನ್ನ ಮಾವನ ಮುಂದಿನ ಕಾರ್ಯಕ್ಕೆ ಮನೆಗೆ ಹೊರಡುವ ಬದಲು, ಪುಟ್ಟುವಿನ ತೋಟದ ಮನೆಯ ಕಡೆಗೆ ಚೂರಿಯ ವಿಷಯ ಖಾತರಿಗಾಗಲಿ ನಡೆದಿದ್ದ. ದಾರಿಯಲ್ಲಿ ಗಿರೀಶನಿಗೂ ಅವನು ಖರೀದಿಸಿ ಕಳೆದಿದ್ದ ಚಾಕುವಿನ ವರ್ತಮಾನಕ್ಕಾಗಿ ಮೂರ್ನಾಲ್ಕು ಭಾರಿ ಕರೆ ಮಾಡಿದ್ದ. ಯಾವ ಕರೆಗೂ ಗಿರೀಶ ಉತ್ತರಿಸಿರಲಿಲ್ಲ.

ಇತ್ತ ಕಡೆ ನಟರಾಜು ಸೀನಪ್ಪ ನೋಟಿಸಿಕೊಂಡಿದ್ದ ಎಲ್ಲರನ್ನು ವಿಚಾರಣೆಗೆ ಬರಹೇಳಿ ತಿಂಡಿಗೆಂದು ತನ್ನ ಕ್ವಾಟ್ರಸ್ ಗೆ ಮರಳಿದ್ದ. ಹರಿ ಬದುಕಿದ್ದಿದ್ದರೆ ಅನಾಥವಾಗಬೇಕಿದ್ದ ಎಲ್ಲ ವಿಷಯಗಳಿಗೂ ಅವನ ಸಾವು ನೆಂಟಸ್ತಿಕೆ ಬೆಳೆಸಿ ಗಮನ ಕೊಡುವಂತೆ ಮಾಡಿದ್ದಿತು.

ಇತ್ತ ಸ್ಟೇಷನ್ ಬಳಿಗೆ ಮತ್ತದೇ ಮುದುಕ ತನ್ನ ಮನೆ ಖಾಲಿ ಮಾಡಿಸಿ ಕೊಡುವ ಸಹಾಯಕ್ಕಾಗಿ ಬಂದು ನಿಂತಿದ್ದ.

"ಸಾರ್, ಆಮೇಲೆ ಬಾ ಅಂದಿದ್ರು ಸಾಹೇಬ್ರು. ದಫೇದಾರ್ ನ ಜೊತೆ ಮಾಡಿ ಕಳ್ಸ್ತೀನಿ ಅಂದಿದ್ರಲ್ಲ"

ಮತ್ತೆ ಸಿಟ್ಟಿನಿಂದ ಕೆಂಪಾದ ಸೀನಪ್ಪ ಸ್ವಲ್ಪ ಹೊತ್ತು ಧೀರ್ಘ ಉಸಿರಾಡುತ್ತ ನಂತರ "ನಿಮ್ ಸಾಹೇಬ್ರು, ತಿಂಡಿಗೆ ಹೋಗಿದ್ದಾರೆ. ಆಮೇಲೆ ಬರೋಗು ತಾತ. ಸಿಗ್ತಾರೆ" ಎಂದಿದ್ದ.

ಮತ್ತೇನೋ ನೆನಪಾಗಿ ಸ್ವಲ್ಪ ವರ್ಕೌಟ್ ಮಾಡ್ಕೊಳೋಣ ಎಂದು ಮುದಿಯನನ್ನು ತಡೆದು ಮೆಲ್ಲಗೆ ಮಾತನಾಡಿಸಿದ್ದ.

"ಎಲ್ಲಿ ಮನೆ?"

"ಕಂಟೋನ್ಮೆಂಟ್ ಪಕ್ಕ ಸ್ವಾಮಿ. ಚಿಕ್ದು ಎರ್ಡ್ ಮನೆ ಇದ್ಯಲ್ಲ, ದೊಡ್ ಪಡಸಾಲೆದು. ಅದೇ ನಮ ಮನೆ. ಒಂದು ಬಾಡಿಗೆಗೆ ಕೊಟ್ಟಿದ್ದೀನಿ, ಪಕ್ಕ ನಾನೆ ಇರೋದು. ಮಕ್ಳು ಮರಿ ಇಲ್ಲ ಸ್ವಾಮಿ. ಆ ಬಾಡಿಗೆ ಬಂದ್ರೇನೇ ನಂದ್ ಊಟ ತಿಂಡಿ. ಏನೋ ಸ್ವಲ್ಪ ಮನ್ಸು ಮಾಡಿ ಸಾಮಿ"

ಕೇಳಿದ ಒಂದು ಪ್ರಶ್ನೆಗೆ ತನ್ನ ಸಮಸ್ಯೆ ಪರಿಹಾರವಾಗುವ ಆಶಯದಲ್ಲಿ ತನ್ನೆಲ್ಲ ವಿವರವನ್ನು ಒಂದೇ ಉಸಿರಿನಲ್ಲಿ ಕೊಟ್ಟಿದ್ದ ಮುದುಕ.

"ನಮ್ಮದೇನೂ ದೊಡ್ ಮನಸೇ ತಾತ. ಆದ್ರೆ ನಿಂಗು ಇರ್ಬೇಕಲ್ಲ? ಮನೆ ಖಾಲಿ ಮಾಡ್ಸೋದ್ ಏನು. ಬಾಡಿಗೇನು ವಸೂಲಿ ಮಾಡ್ಸೋಣ. ಆದರೆ ಫೀಸ್ ಆಗುತ್ತಲ್ಲ"

"ಎಷ್ಟು ಸಾಮಿ"

"ಮನ್ಸು ನಿಂದು. ಎಷ್ಟ್ ದೊಡ್ಡದು ಮಾಡ್ತಿಯಾ, ಅಷ್ಟ್ ಬೇಗ ಕೆಲಸ"

ಸ್ವಲ್ಪ ಯೋಚಿಸಿದಂತೆ ನಟಿಸಿ ಮುದುಕ "ಎಷ್ಟೇಳಿದ್ರೆ ಏನು ಎತ್ತ ನೋಡಬೋದಿತ್ತು" ಎಂದ.

"ಎರ್ಡ್ ತಿಂಗ್ಳು ಬಾಡಿಗೆ"

"ಸಾಮಿ, ವಸೂಲಿ ಅಂದ್ರಲ್ಲ. ಅವ್ನ್ ಕೊಟ್ಟಿದ್ದೆಲ್ಲ ನೀವೇ ಇಟ್ಕೋಳುವರಂತೆ. ನಂಗ್ ಮನೆ ಬಿಡ್ಸಿ ಕೊಡಿ ಸಾಕು" ಎಂದಿದ್ದ ಮುದುಕ.

ಅಷ್ಟರಲ್ಲಿ ನಟರಾಜುವಿನ ಕಾರು ಬರುತ್ತಿರುವುದು ದೂರದಲ್ಲಿ ಕಂಡು ಮುದುಕನ ಫೋನ್ ನಂಬರ್ ಪಡೆದು ಕಳುಹಿಸಿದ್ದ ಸೀನಪ್ಪ.

"ಏನ್ರಿ ಸೀನಪ್ಪ. ಬಂದ್ರ ಲಿಸ್ಟ್ ಲಿ ಇದ್ದವ್ರು"

"ಅಪ್ಪಾಜಿ ಮತ್ತೆ ಆಫೀಸ್ ಬಾಯ್  ಬಂದ್ರು ಸಾರ್. ಒಳಗ್ ಕೂರ್ಸಿದ್ದೀನಿ. ಆ ಮೂರ್ ಜನ ಪಿಕ್ ಪಾಕೆಟ್ ಮಾಡೋರ್ ಅಂದ್ನಲ್ಲ ಸಾರ್. ಅವ್ರು 1ಸ್ಟ್ ಟೈಮ್ ಬರ್ತೀನಿ ಅಂದು, ಇವಾಗ ಫೋನ್ ಸ್ವಿಚ್ ಆಫ್ ಆಗಿದೆ."

"ಆ ಅರ್ಜುನಂಗೆ ಫೋನ್ ಮಾಡಿ ಅವರ ಅಡ್ರೆಸ್ ತಿಳ್ಕೊಳ್ಳಿ. ಸಿಕ್ಕಿಲ್ಲ ಅಂದ್ರೆ ಹಳೆ ರಿಜಿಸ್ಟ್ರಿಯ ಓಪನ್ ಮಾಡಿ ಜಾತಕ ಹುಡ್ಕಿ. ಲ್ಯಾಬ್ ರಿಪೋರ್ಟ್ ಬರೋದ್ರೊಳಗೆ ಅವ್ರು ನನ್ ಮುಂದೆ ಇರ್ಬೇಕು"

"ಆಗ್ಲಿ ಸರ್. ವೆಂಕ್ಟೇಶ ಗೆ ಹೇಳ್ತಿನಿ"

"ಇದೇನು ರಾಬರಿ ಕೇಸ್ ಏನ್ರಿ? ಅವ್ನ ಒಬ್ನೇ ಕಳ್ಸೋಕೆ.  ಓನರ್ ಶಿಪ್ ನೀವ್ ತೊಗೋಬೇಕು ಸೀನಪ್ಪ. ಬೇಗ ಹುಡುಕ್ಸಿ"
ನಟರಾಜ್ ಕೊಟ್ಟಿದ್ದ ಆಜ್ಞೆಗೆ ಒಪ್ಪಿ ಅವರೆದುರಿಗೆ ಹೂಗುಟ್ಟಿದ್ದ ಸೀನಪ್ಪ, ದಫೇದಾರ್ ವೆಂಕ್ಟೇಷನನ್ನು ಕರೆಸಿ ಅವರ 

ಮಾಹಿತಿ ಕೊಟ್ಟು ಅವನ ಜೊತೆ ಹೊರಡಲು ತಯಾರಾಗಲು ಹೇಳಿದ್ದ.

ನಟರಾಜ್ ಒಳಗೆ ಹೋಗಿದ್ದನ್ನು ಗಮನಿಸಿ ಎರಡೇ ಕ್ಷಣದಲ್ಲಿ ಮನಸ್ಸು ಬದಲಿಸಿ, ವೆಂಕಟೇಶ ಒಬ್ಬನನ್ನೇ ಅವರ ಹುಡುಕಾಟಕ್ಕೆ ಕಳಿಸಿ ತಾನು ಮುದುಕನ ಫೋನ್ ನಂಬರ್ ಡಯಲ್ ಮಾಡತೊಡಗಿದ. ಊರಲ್ಲಿ ಕೊಲೆ ಇರಲಿ, ದರೋಡೆ ಇರಲಿ ಸೀನಪ್ಪನ ಹೊಟ್ಟೆ ತುಂಬಿಸುವುದು ಇಂತಹ ಸಣ್ಣ ಕೆಲಸಗಳಾಗಿದ್ದರಿಂದ ಅವನಿಗೆ ಕೊಲೆಯ ಕೇಸ್ ಅಮುಖ್ಯವಾಗಿ ಹೋಯಿತು.

"ಹಲೋ, ಕಂಪ್ಲೇಂಟ್ ಕೊಟ್ಟಿದ್ರಲ್ಲ ಕಂಟೋನ್ಮೆಂಟ್ ಹತ್ರ ಮನೆ ಟೆನಂಟ್ ತೊಂದ್ರೆ ಕೊಡ್ತಿದ್ದಾನೆ ಅಂತ. ಬರ್ತಿದ್ದೀನಿ ಇನ್ 5 ನಿಮಿಷ"

ಇತ್ತ ಜನ್ನ ಪುಟ್ಟುವಿನ ತೋಟದಮನೆ ತಲುಪಿದ್ದ. ಜಗತ್ತಿನ ಅರಿವೇ ಇಲ್ಲದೆ ಪುಟ್ಟ ತನ್ನ ಸುತ್ತಲಿದ್ದ ಲಕ್ಷ್ಮಣ ರೇಖೆ ಅಳಿದಿದ್ದ ಖುಷಿಯಲ್ಲಿ ತನಗೆ ಸಿಕ್ಕಿದ್ದ ಸ್ವತಂತ್ರ ಸಂಭ್ರಮದಲ್ಲಿ ಆಟವಾಡುತ್ತ ಕುಳಿತಿದ್ದ. ಇತ್ತ ಗೋಪಿ ತಾನೇ ಆಕಾಶ ಹಿಡಿದು ನಿಂತಿರುವಂತೆ ಚಿಂತೆಯಲ್ಲಿ ಮುಳುಗಿದ್ದ.

"ಕತ್ತಿಸಿಕ್ತೇನೋ?"

"ಇಲ್ಲಣ್ಣ, ಮಷೀನ್ ಮನೆ, ತೆಂಗಿನ ಚಪ್ರ ಎಲ್ಲ ನೋಡ್ಬಿಟ್ಟೆ. ಎಲ್ಲೂ ಕಂಡಿಲ್ಲ"

ಗೋಪಿ ಇನ್ನು ತನ್ನ ಉತ್ತರ ಮುಗಿಸಿರಲಿಲ್ಲ ಅಷ್ಟರಲ್ಲೇ ತೋಟದ ಆಳು ಚಿಂಕ್ರ ಇವರ ಚಿಂತೆಗೆ ಕಾರಣವಾಗಿದ್ದ ಅದೇ ಕತ್ತಿಯನ್ನು ಕೈಯಲ್ಲಿ ಹಿಡಿದು ಒಳಗೆ ನಡೆದು ಹೊರಟಿದ್ದ.

ಇದನ್ನು ಕಂಡು ತನ್ನ ಮೇಲೆಯೇ ಬಿದ್ದಿದ್ದ ಸಂಪೂರ್ಣ ಭಾರವನ್ನು ಯಾರೋ ಇಳಿಸಿದಂತಾಗಿ
"ಲೋ ಚಿಂಕ್ರ. ಅದೆಲ್ಲೋ ಇತ್ತು ಕತ್ತಿ" ಎಂದ.

ತಾನು ನಿರೀಕ್ಷಿಸದ ಪ್ರಶ್ನೆಯೊಂದು ಒಡೆಯನ ಮಗನಿಂದ ಬಂದದ್ದು ಚಿಂಕ್ರನಿಗೆ ಹಿತವೆನಿಸಲಿಲ್ಲ.

ಹಲ್ಲು ಗಿಂಜುತ್ತ "ಬುದಿ, ನೆನ್ನೆ ನೀರ ಕಟ್ಟಿದ್ದೋ. ತೆಗ್ಯಕ್ ಕತ್ತಿ ಹೊಯ್ದಿದ್ದೆ. ಹಿ ಹಿ ಹಿ ಹಿ" ಎಂದು 5 ಬಾರಿ ನಕ್ಕು ತನ್ನ ಮಾತು ಮುಗಿಸಿದ್ದ.

ಅದರ ನಡುವೆಯೇ ಗಿರೀಶನಿಂದ ಜನ್ನನಿಗೆ ಕರೆ ಬಂದಿತ್ತು. ಚಾಕು ತನ್ನ ಅಮ್ಮ ಹಿಂದಿನ ದಿನವೇ ತೆಗೆದುಕೊಂಡಿದ್ದರೆಂದೂ, ಅದು ತನಗೆ ಅರಿವಿರಲಿಲ್ಲವೆಂದು ಅವನು ವಿಷಯ ತಲುಪಿಸಿ ಮಹತ್ತರ ವಾದ ಬೆಟ್ಟವೊಂದು ಎತ್ತಿ ಹಿಡಿದಿದ್ದ ಜನ್ನನಿಗೆ ಉಪಶಮನ ಕೊಟ್ಟಿದ್ದ. ದೀರ್ಘ ಉಸಿರಾಡುತ್ತ ಗೋಪಿ, ಜನ್ನ ಇಬ್ಬರು ತನ್ನ ಮಾವನ ಮನೆಯ ಕಡೆಗೆ ಹೊರಟರು.

ಮರಣ ಬಾವಿಗೆ ಬಿದ್ದು ಈಜುತ್ತಿದ್ದ ಅಷ್ಟು ಜನರಲ್ಲಿ ಜನ್ನನು , ಪುಟ್ಟುವೂ ಸಲೀಸಾಗಿ ಆಚೆ ಬಂದಿದ್ದರು. ಉಳಿದವರ ವಿಚಾರಣೆ ಇತ್ತ ಸ್ಟೇಷನ್ ನಲ್ಲಿ ನಡೆಯುತ್ತಿತ್ತು. ತಾನು ಕೇಳುತ್ತಿದ್ದ ಪ್ರಶ್ನೆ ಎಲ್ಲದಕ್ಕೂ ಉತ್ತರ ಕೊಡಿಸುತ್ತದೆ ಎಂಬ ನಿರಿಕ್ಷಣೆಯಲ್ಲಿ ವಿಚಾರಣೆ ನಡೆಸುತ್ತಿದ್ದ ನಟರಾಜುವಿನ ಫೋನ್ ರಿಂಗ್ ಆಗಿತ್ತು.

"ಹೇಳ್ರಿ ಸೀನಪ್ಪ. ಸಿಕ್ರ ಅವ್ರು ಮೂರ್ಜನ"

"ಸಾರ್, ಬ್ಲಡ್ ಮನೆ ತುಂಬ!"

"ಅದೇನ್ ಸರ್ಯಾಗ್ ಹೇಳ್ರಿ"

"ಸಾರ್, ಆ ಮುದ್ಕ ಬಂದಿದ್ನಲ್ಲ ಮನೆ ಖಾಲಿ ಮಾಡ್ಸಿ ಕೊಡಿ ಅಂತ. ನೀವೇ ಕಾನ್ಸ್ಟೇಬಲ್ ನ ಕಳ್ಸ್ತೀನಿ ಅಂದಿದ್ರಿ. ಅಯ್ಯೋ ಪಾಪ ಅನ್ಸಿ ನಾನೆ ಬಂದೆ. ಮನೆತುಂಬ ರಕ್ತ. ಅವ್ನ್ ಕೈ ಬಟ್ಟೆ ಮೇಲೆಲ್ಲಾ ಆಗಿದೆ. ಪಕ್ಕ ಎರ್ಡ್ ಚೂರಿ ಈಳಿಗೆಮಣೆ ಬಿದ್ದಿದೆ. ಅದ್ರಲ್ಲೂ ಆರಿರೋ ರಕ್ತದ್ ಪಸೆ!"

"ಎರಡೇ ದಿನದಲ್ಲಿ ಎರ್ಡ್ ಮರ್ಡರ್ ಏನ್ರಿ. ಸೀನಪ್ಪ!"

"ಸಾರ್, ಆಸಾಮಿ ಉಸ್ರು ಇದೆ. ಸರಾಪು ವಾಸ್ನೆ. ಕುಡಿದಿರೋದು ಇಳಿದೆ ಇನ್ನು ಮಲಗಿದ್ದಾನೆ. ಇವ್ನೆ ಯಾರ್ನೋ ಎತ್ತಿಬೊದು!"

"ಡ್ರೈವರ್ ರಾಮ್ ಮೂರ್ತಿ ಗೆ ಫೋನ್ ಮಾಡಿ ಅಡ್ರೆಸ್ ಕೊಡಿ. ಈಗ್ಲೇ ಹೊರಟೆ ನಾನು!"

ಹತ್ತೇ ಬೀದಿಯ ಆ ಊರಿನಲ್ಲಿ ದೊಡ್ಡ ವಿಷಯ ಗಾಳಿಯಲ್ಲಿಯೇ ತೇಲಿ ಊರೆಲ್ಲ ಪಸರಿಸಿ, ಬಸ್ ಸ್ಟಾಂಡ್ ಬಳಿಯ ರಾಮಣ್ಣನ ಹೋಟೆಲಿನಲ್ಲಿ ಸುದ್ದಿ ಸಮಾಲೋಚನೆ ನಡೆದಿತ್ತು.

"ರಾಮಣ್ಣ, ನಿಮ್ ಅಡಿಗೆ ಭಟ್ಟ ಶಂಕ್ರ. ಅದೇ ನೀನು ಬರ್ಬೇಡ ಅಂತ ದಬ್ಬಿದ್ಯಲ್ಲಯ್ಯ ಮೊನ್ನೆ. ಅವ್ನೆ ಸತ್ನಂತೆ?"
"ರೀ ಗೌಡ್ರೆ, ಸತ್ತಿದ್ ಅವ್ನಲ್ಲ ರೀ. ರಾತ್ರಿ ಕಂಠಪೂರ್ತಿ ಕುಡುದು ಆ ಹೊಸಬೀದಿ ಹಾದಿಲಿ ಹೋಗ್ತಿದ್ನಂತೆ. ಯಾವ್ದೋ ನಾಯಿ ಬೊಗಳಿದ್ದಕ್ಕೆ ಅದನ್ನ ಸಾಯ್ಸಿ, ಹೊತ್ಕೊಂಡ್ ಮನೇಲಿ ಇಟ್ಕೊಂಡಿದ್ನಂತೆ!"

"ಅದ್ಯಾವ್ ನಾಯಿನೂ ಇಲ್ಲ ಸಾರ್. ನಾನು ಇವಾಗ ತಾನೇ ಅವ್ನ್ ಮನೆಕಡೆ ಇಂದ ಬರ್ತಿದ್ದೀನಿ. ಮನೆಯೆಲ್ಲ ರಕ್ತ ಅಂತೆ. ಆಸಾಮಿ ಚಿತ್ತಲ್ಲಿ ಮಲ್ಗಿದ್ನಂತೆ. ಈ ಪೆಟ್ಟಿ ಅಂಗ್ಡಿ ಅಜ್ಜನ ಮಗ ಹರಿಯಪ್ಪನ್ ಬಾಡಿ ಸಿಕ್ಕಿತ್ತಲ್ಲ ಬೆಳಗಿನ ಜಾವಾ. ಈ ಶಂಕ್ರನದೇ ಕೆಲಸ ಅನ್ನೋದು ಪೊಲೀಸ್ರ ಗುಮಾನಿ ಅಂತೆ. ನಮ್ ಬಾಮೈದ ವೆಂಕ್ಟೇಶ ಹೇಳ್ದ. ಅವ್ನು ಕಾನ್ಸ್ಟೇಬಲ್ ಅಲ್ವೇ !!!"

ಕೊಲೆಯ ಕಾರಣವೇನೆಂದು ಜನ್ನ, ನಟರಾಜರು ಅನುಮಾನಿಸಿದ್ದ ಕಪೋಲ ಕಲ್ಪಿತ ಕಥೆಗಳ ಕಣಗಳೆಲ್ಲ ಅರ್ಥ ಕಳೆದು ಕಳಚಿಕೊಂಡು, ಹೊಸದೊಂದು ಕಥೆಗೆ ಬಹುಪರಾಕ್ ಹಾಕಿದ್ದವು!.  


No comments