ರೇಲಿ ಬೈಸಿಕಲ್ಲು!
ಹಿಂದಿನದು - ಭಾಗ1. ನೆಪ್ಪು
ಭಾಗ 2. ಅನಿಶ್ಚಿತ
ಅಜ್ಜನ
ಕಥೆ ಅಂತ್ಯಕ್ಕೆ ಬಂದಿತ್ತು. "ಅದ್ಯಾವ್ ಬಾಯಲ್ಲಿ ಹೇಳ್ದ ಅಜ್ಜ, ಮಾಲು ಕೊಟ್ಯಲ್ಲ ಇನ್ನು
ನನ್ ತೀರಿದ್ರು ಸೈ ಅಂತ! ಹೊರಟೇ
ಬಿಟ್ಟ! ಆದ್ರೂ ಒಳ್ಳೆ ಸಾವು. ನರಳಿಲ್ಲ, ಅರ್ಚಿಲ್ಲ. ಮಲಗಿದ್ದಂಗೆ ಉಸ್ರು ಮರ್ತು ಶವ ಆಗವ್ನೆ! ನಂಗೂ
ಸಾಯೋವತ್ತಿಗೆ ಇಂಥೆದೆ ಸುಖ ಕೊಡಪ್ಪ ದೇವರೇ!"
ಎಂದು ಮನದಲ್ಲೇ ಹೇಳಿಕೊಂಡ ಜನ್ನ.
ವ್ಯಸನಿಗೆ
ಕಾರಣ ಬೇಕಷ್ಟೆ ಎಂಬ ಮಾತಿನಂತೆ, ಅಜ್ಜನ
ಸಾವಿನಿಂದ ಜನ್ನ ಕಳೆದುಕೊಂಡಿದ್ದೇನಿಲ್ಲವಾದರೂ, ಸಂಜೆ ಅಜ್ಜನ ಅಂಗಡಿಯ
ಬಳಿ ಉಳಿದಿದ್ದ ಬತ್ತಿ (ಸೊಪ್ಪು) ಹಚ್ಚಿ ಶೋಕಾಚರಣೆ ಮಾಡಬೇಕೆಂದು ನಿರ್ಧರಿಸಿದ!
ಹೆಡ್
ಫೋನಿನಲ್ಲಿ ಒಂದಷ್ಟು ಹಾಡುಗಳು ಮುಗಿದು, ಅಜ್ಜನ ಕಥೆಯು ಅಂತ್ಯಕ್ಕೆ ಬರುವಷ್ಟರಲ್ಲಿ, ಬಸ್ ಊರು ಮುಟ್ಟಿತ್ತು.
ಹೆಡ್ ಫೋನ್ ತೆಗೆದಿಟ್ಟ ಕಾರಣ
ಕನ್ಸರ್ಟ್ ನಿಂದ ಸೀಧಾ ವಾಸ್ತವದ
ಗಲಾಟೆ ಪ್ರಪಂಚಕ್ಕೆ ಅವನ ಕಿವಿ ಬಂದು
ಬಿದ್ದಿತ್ತು.
"ಸೌತೆಕಾಯಿ,
ಕಡ್ಲೆಕಾಯಿ ಹತ್ರುಪಾಯ್"
"ಚಿಲ್ರೆ
5 ರೂಪಾಯಿ ಇದ್ದೀಯ ನೋಡಿ"
"ಬೆಂಗ್ಳುರ್
ನಾನ್ ಸ್ಟಾಪ್, ಯಾರ್ರ್ರಿ ಬೆಂಗ್ಲೂರ್" ಮತ್ತೆಷ್ಟೋ ಧ್ವನಿಗಳು ಒಟ್ಟುಗೂಡಿ ಜನ್ನನ ಕಿವಿಗೆ ಒಮ್ಮೆಲೇ ಜಾಡಿಸತೊಡಗಿದವು.
"ನಾಳೆಯಿಂದ
ಇಲ್ಲಿ ಕಾಣುಸ್ಕೊಬೇಡ ದೇವ್ರು ನೀನು. ಹೊರಡು" ಎಂಬ ಕೂಗು ಬೇರೆಲ್ಲ ಗಲಾಟೆಯನ್ನು
ಮೀರಿ ಒಮ್ಮೆಲೇ ಅವನ ಕಿವಿಗೆ ಮೀಟಿತ್ತು.
ಆ ಧ್ವನಿ ಅವನಿಗೆ ಪರಿಚಯವಾದದ್ದು, ಕೂಡಲೇ ಅಜ್ಜನ ಸೈಕಲ್ ಬೆಲ್ ಹೊಡೆಯ ಬರುವ
ಪುಟ್ಟನ ಅಪ್ಪ ಹೋಟೆಲ್ ರಾಮಣ್ಣನೆಂದು
ಗುರುತಿಸಿದ್ದ. ಬಸ್ ಇಳಿದ ಕೂಡಲೇ
ಎಲ್ಲರು ತಮ್ಮ ಕೆಲಸ ಕಾರ್ಯ
ಮರೆತು ಆ ಧ್ವನಿ ಹಿಂಬಾಲಿಸಿ
ಹೋಟೆಲ್ ಬಳಿ ನಿಂತು ನೋಡುತ್ತಿದ್ದರು.
"ಇದ್ಯಾಕೋ
ರಾಮಣ್ಣ, ಒಳ್ಳೆ ಭಟ್ಟ ಅಲ್ವೇನಯ್ಯ ಅವ್ನು!
ಹಿಂಗ್ ಅಟ್ತಾ ಇದ್ಯಲಯ್ಯ"
"ಅವ್ನ್
ಹೆಂಡ್ತಿ ಬಿಟ್ಟೋದ್ಳಂತೆ. ಅದುಕ್ಕೆ ಇವ್ನ್ ಅಡಿಗೆ ಮಾಡೋ ಜಾಗಕ್ಕೆ ಕುಡ್ಕೊಂಡ್
ಬಂದ್ರೆ ನಡಿತಾದ ರಾಯ್ರೆ? ಬಡ್ಡಿಮಗಂಗೆ 3 ದಿನ ಹೇಳ್ದೆ. ತಿದ್ಕೊಂಡಿಲ್ಲ.
ಇವತ್ತು ಮುಗಿತು ಅವ್ನ್ ಋಣ ಇಲ್ಲಿಗೆ"
ಎಲ್ಲ
ಮಾತುಕತೆಯನ್ನು ನಿಂತು ನೋಡುತ್ತಿದ್ದ ಜನ್ನನಿಗೆ ಪೂರ್ತಿ ಕಥೆ ಅರ್ಥವಾಗಿತ್ತು.
ರಾಮಣ್ಣ
ಹೋಟೆಲ್ ಮಾಲೀಕ. ಶಂಕ್ರು ಅಡುಗೆ ಭಟ್ಟ, ಮೊನ್ನೆ ತಾನೇ ಮದ್ವೆ ಆಗಿದ್ದ.
ಇವ್ನು ಗಂಡಸೇ ಅಲ್ಲ ಅಂತ ಗಲಭೆ
ಗಬ್ಬೆಬಿಸಿ ಬಿಟ್ಟು ಹೋಗಿದ್ಲು ಹೆಂಡ್ತಿ. ಹೆಂಡ್ತಿ ಬಿಟ್ಟೋದ್ಲು ಸರಿ, ಜೊತೆಗೆ ಮರ್ಯಾದೆನು ನುಂಗುದ್ಲಲ್ಲ ಅಂತ ಶಂಕ್ರು ಬುದ್ದಿ
ಸೀಮಿತ ಕಳೆದುಕೊಂಡಿದ್ದ. ಊರಿನ ಪುಡಿ ಪೋಲಿ
ಪುಂಡರೆಲ್ಲ ಅವನನ್ನು ನಾಮರ್ದನೆಂದು ರೇಗಿಸಲು ಹಚ್ಚಿದ್ದರು. ಕುಡಿಯೋದು, ಹೋಟೆಲ್ ಸಪ್ಲಯರ್ ಹುಡುಗನಿಗೆ ಹೊಡೆಯೋದನ್ನು ಶುರು ಮಾಡಿದ್ದ. ಮಿಕ್ಕವರಂತೆ
ಮಾಡೋಕೆ ಏನು ಕೆಲಸವಿಲ್ಲದ ಕಾರಣ
ಜನ್ನನು ಪೂರ್ತಿ ಸಂಭಾಷಣೆ ಆಲಿಸಿ ನಂತರ ಮನೆ ಕಡೆ
ಹೊರಟ.
ಮೇಲೆದ್ದಿದ್ದ
ರಾಮಣ್ಣನ ಧ್ವನಿ ಶಂಕ್ರು ಹೊರಟದ್ದನ್ನು ಕಂಡು ನಿಧಾನವಾಗಿ ತಗ್ಗಿತ್ತು.
ಮುಗಿದಿದ್ದ ಆಟಕ್ಕೆ ಪ್ರೇಕ್ಷಕರೆಲ್ಲ, ಜನ್ನನೂ ಸೇರಿದಂತೆ ವಿಧಾಯ ಹೇಳುತ್ತಾ ಅವರವರ ದಾರಿಗೆ ನಡೆದಿದ್ದರು. ದಾರಿಯಲ್ಲಿ ಅಜ್ಜನ ಹಳೆಯ ಖಾಲಿ ಅಂಗಡಿ ಕಂಡು, ಕೊಂಚ ನಿಂತ. ಅಜ್ಜನ ಸಂಪೂರ್ಣ ಅಗಲಿಕೆಯ ವಾಸ್ತವಕ್ಕೆ ಜನ್ನ ಇನ್ನು ಹೊಂದಿಕೊಂಡಿರದ
ಕಾರಣ, ಅವನ ಪ್ರಜ್ಞೆ ಪದೇ
ಪದೇ ಅಜ್ಜನಿರದ ವಿಷಯವನ್ನು ಕೂಗಿ ಜ್ಞಾಪಿಸಿತ್ತು!
ಅಂಗಡಿಯ
ಹಿಂದೆಯೇ ಹೊಂದಿಕೊಂಡಂತಿದ್ದ ಶ್ರೀಹರಿಯ ಬಾವಿಮನೆ. ಅದರಾಚೆಗೆ ಅನಾಥವಾಗಿ ನಿಂತಿದ್ದ ರೇಲಿ ಬೈಸಿಕಲ್ಲು. ನಡೆಯುತ್ತಿದ್ದ
ಅವನ ಕಾಲು ಒಮ್ಮೆಲೇ ತಟಸ್ಥವಾಗಿ
ನಿಂತಿತ್ತು. ಅವನ ದೃಷ್ಟಿ ಮಾಯವೋ
ಎಂಬಂತೆ ಆ ಬೈಸಿಕಲ್ ಮೇಲೆ
ನೆಟ್ಟಿತು. ದೃಷ್ಟಿಯಾಚೆಗಿನ ಶೂನ್ಯ ಆಲೋಚನೆ! ಮಾನವ ಮತ್ತು ವಸ್ತುಗಳ
ಸಂಬಂಧದ ಸಂಕೀರ್ಣ ಒಗಟೊಂದನ್ನು ಜನ್ನನ ಚಿಂತಕ ಮನಸ್ಸು ಬಿಡಿಸಿತ್ತು. ಭೌತಿಕ
ಜಗತ್ತಿನ ಎಷ್ಟೋ ವಿಷಯಗಳು/ವಸ್ತುಗಳು, ವ್ಯಕ್ತಿಯ ಸ್ವಂತ ಬದುಕಿನ ಸಿಂಹಪಾಲಿನಷ್ಟುಭಾಗವಾಗಿ, ಅವರ ಅಗಲಿಕೆಯಲ್ಲಿ ಅವರನ್ನೇ
ಪ್ರತಿನಿಧಿಸುತ್ತದೆ. ಹೀಗೆಯೇ ಗಂಭೀರವಾಗಿ ನಿಂತಿದ್ದ ಆ ಬೈಸಿಕಲ್, ತನ್ನಜ್ಜನ
ಮತ್ತೊಂದು ಸ್ವರೂಪವಾಗಿ ಜನ್ನನಿಗೆ ಕಂಡಿತ್ತು! ತನಗೆ
ಅರಿವಿಲ್ಲದಂತೆಯೇ ಏಳೆಂಟು ನಿಮಿಷ ಮೌನ ಧರಿಸಿ ಸೈಕಲ್ಲಿನ
ಮೇಲೆ, ಅಲ್ಲ ಅಲ್ಲ, ತನ್ನಜ್ಜನ ಸ್ವರೂಪದ ಮೇಲೆ ದೃಷ್ಟಿಸಿದ್ದ! ಶಾಂತವಾಗಿದ್ದ ಅವನ ಮನಃ ಸರೋವರದ
ಮೇಲೆ ಹತ್ತಾರು ಬಾರಿ ಸೈಕಲ್ ಬೆಲ್ಲು ಹೊಡೆಯುವ ಮೂಲಕ ಕಲ್ಲೆಸೆದು ಅಗಾಧ
ಅಲೆಮೂಡಿಸಿದ್ದ ಪುಟ್ಟು.
"ಎಷ್ಟ್
ಸಲ ಮಗನೆ ಹೇಳೋದ್ ನಿಂಗೆ.
ಇನ್ನೊಂದ್ಸಲ ಬೆಲ್ ಹೊಡ್ಯಕ್ಕೆ ಇಲ್ಲಿಗ್
ಬಂದ್ರೆ ಕಾಲು ಮುರ್ದು ಕೈಗೆ
ಕೊಡ್ತಿನ್" ಎನ್ನುತ್ತಾ ಜೋರಾಗಿ ಗದರಿದ್ದ ಜನ್ನನ ಮಾವ ಶ್ರೀಹರಿ, ಪುಟ್ಟುವನ್ನು ಲಘುವಾಗಿ ದೂಡಿದ್ದ!
"ಇದ್ಯಾಕಪ್ಪ
ಮಾವ, ಚಿಕ್ ಹುಡ್ಗನ ಮೇಲೆ
ಹಿಂಗ್ ರೇಗ್ತಿದ್ಯ? ಬೆಲ್ಲು ತಾನೇ ಹೊಡಿಲಿ ಬಿಡು"
"ಸುಮ್ನೆ
ಇರಪ್ಪ ನೀನು, ಸಲಿಗೆ ಕೊಟ್ಟಿರೋದ್ಕೆ ಇವ್ನುದು ಬೆಳಿಗಿಂದ ಕಿರಿಕಿರಿ. ಗಂಟೆಗ್ ಇಪ್ಪತ್ತು ಸಾರಿ ಬಂದು ಹೊಡೀತಾನೆ.
ನಿಮ್ ಅಜ್ಜ ಕೊಟ್ಟಿದ್ ಸದರಕ್ಕೆ
ನಮ್ ಕಿವಿ ಕೆಂಪಾದ್ವು. ಅರ್ಜುನಂಗೆ
ಹೇಳಿದ್ದೀನಿ, ಒಳ್ಳೆ ರೇಟ್ ಕೊಡ್ಸಿ ಆ
ತಗಡ್ನ ಎತ್ಕೊಂಡ್ ಹೋಗ್ ಅಂತ!" ಎಂದ
ಶ್ರೀಹರಿ.
ಪುಟ್ಟನ ಮುಖ ಕೋಪದಿಂದ ಕೆಂಪಾಗಿ, ಹಲ್ಲು ಮಸಿಯುತ್ತಿತ್ತು. ಬಾಲ್ಯ ಎಂದಿಗೂ ಅಸಹಾಯಕತೆಯೇ! ಚಿಕ್ಕವಯಸ್ಸಿನಲ್ಲಿ
ಸಣ್ಣ ಸಂತೋಷಗಳಿಗೂ ಅಡ್ಡಿಗೊಳ್ಳುವ ಪರಿಣಾಮ , ಭವಿಷ್ಯದಲ್ಲಿ ವಿಕಾರ ಮನಸ್ಸಿನ ಸೃಷ್ಟಿಗೆ ಕಾರಣವಾಗುತ್ತದೆ! ಇದನ್ನರಿತಿದ್ದ ಜನ್ನ, ಹುಡುಗನ ಓಲೈಕೆಗೆ ಮುಂದಾಗುತ್ತಾನೆ.
"ನಿಂದಿಲ್ವೇನೊ
ಪುಟ್ಟ ಸೈಕಲ್ಲು"
"ನಂದು
ಬೆಲ್ಲು ಇಷ್ಟ್ ಚೆನ್ನಾಗಿಲ್ಲ". ತನಗೆ ಬೆಲ್ಲು ಹೊಡೆಯಲಡ್ಡಿ
ಮಾಡುವ ಈ ಪ್ರಪಂಚವನ್ನು ಸುಟ್ಟುಬಿಡುವಷ್ಟು
ಕೋಪ ಅವನ ಮುಖದಲ್ಲಿತ್ತು. ಹತ್ತು
ವರುಷದ ಪುಟ್ಟನಿಗೆ ಶ್ರೀಹರಿ ಬೈದಿದ್ದೆ ಅವಮಾನ, ಬೆಲ್ಲು ಹೊಡೆಯಲು ಇರುವ ಅಡಚಣೆಯೇ ಜೀವನ
ಬಿಕ್ಕಟ್ಟು(ಲೈಫ್ ಕ್ರೈಸಿಸ್).
ಪುಟ್ಟುವಿನ
ಮುಖಭಾವ ನೋಡಿಯೇ ಅವನ ಆಲೋಚನೆ ಏನಿರಬಹುದೆಂದು
ಊಹಿಸಿದ ಜನ್ನ ವಿಷಯ ಬದಲಿಸಿ
ಪುಟ್ಟುವಿನ ಅನವಶ್ಯಕ ಮಿಡಿತಕ್ಕೆ ಕಡಿವಾಣ ಹಾಕುವ ಪ್ರಯತ್ನಿಸುತ್ತಾನೆ .
" ಗೋಪಿ
ನಿನ್ನ ಕೇಳ್ತಿದ್ದ. ಅವನು ನಿಂಗೆ ರಾಮಾಯಣ
ಕಥೆ ಹೇಳ್ಬೇಕಂತೆ."
"ಹೂ,
ಶುರು ಮಾಡಿದ್ದ ಅಣ್ಣ. ಎಷ್ಟ್ ಮಸ್ತ್ ಇತ್ತಲ ಕಥೆ?"
"ಎಲ್ಲಿವರ್ಗು
ಹೇಳ್ದ.”
“ಅವ್ನಿಗೆ
ಅವ್ನ್ ಅಜ್ಜಿ ಹೇಳ್ಬೇಕು, ಅವ್ನು ಅದುನ್ನ ಬಂದು ನಂಗೆ ಹೇಳ್ಬೇಕು.
ಇವಾಗ ಲಕ್ಷ್ಮಣ, ರೇಖೆ ಎಳ್ದು ರಾಮನ್
ಹುಡುಕ್ಕೊಂಡು ಹೊರಟಿದ್ದಾನೆ. ಜನ್ನಣ್ಣ, ನಿಂಗ್ ಒಂದ್ ವಿಷ್ಯ ಗೊತ್ತ?"
"ಏನು
ಕೇಳೋ"
"ಲಕ್ಷ್ಮಣ
ರೇಖೆ ದಾಟಿದ್ರೆ ನಿಜ್ವಾಗ್ಲೂ ಬೆಂಕಿ ಹತ್ತುತ್ತ?"
"ಹೂ
ಕಣೋ. ಸುಟ್ಟೋಗ್ತಾರೆ!"
ಸಂಜೆಗೆ
ಅಜ್ಜನ ಶೋಕಾಚರಣೆ ಧಮ್ಮಿನೊಂದಿಗೆ ಆಗಲಿ ಎಂದುಕೊಳ್ಳುತ್ತ ಜನ್ನ
ತನ್ನ ಮನೆಕಡೆ ಹೊರಟ.
ಅಂದುಕೊಂಡಂತೆ
ಸಂಜೆಯವೇಳೆಗೆ ಜನ್ನ ಅಜ್ಜನ ಅಂಗಡಿಯಲ್ಲಿ
ಹಾಜರಿದ್ದ. ದಾರಿ ಹೋಕರನ್ನ ಗಮನಿಸುತ್ತಾ,
ಕತ್ತಲ ದಾರಿಗೆ ಕಾಯುತ್ತ ಕುಳಿತಿದ್ದ. ಗುರುತಿದ್ದ ಒಂದು ಕಾರ್ ವೇಗವಾಗಿ ಬಂದು, ಬ್ರೇಕ್ ಒತ್ತಿದ ಕಾರಣ ನಾಲ್ಕು ಅಡಿಗಳವರೆಗೂ ನೆಲವನ್ನು ಪರಚುತ್ತ ನಿಂತಿತು. ಎರಡೇ ಸೆಕೆಂಡುಗಳ ಅಂತರದಲ್ಲಿ
ಬೈಕ್ ಒಂದು ಕಾರ್ ಹಿಂದೆ
ನಿಂತಿತು.
"ಏನೋ
ಗಿರೀಶ, ಅಪರೂಪ ಆಗ್ಬಿಟ್ಟೆ ಊರಿಗೆ" ಕಾರ್ನಿಂದ ಇಳಿದವನನ್ನು ಗುರುತಿಸಿದ ಜನ್ನ ಪ್ರಶ್ನಿಸುತ್ತಾನೆ.
ಅವಸರದಲ್ಲಿದ್ದಂತಿದ್ದ
ಗಿರೀಶ "ಕಷ್ಟ ಸುಖ ನಾಳೆ
ಮಾತಾಡೋಣ, ಈ ಕಾರ್ ಕೀ
ಇಟ್ಕೋ ಜನ್ನ. ನಿಮ್ ಮನೆ ಹತ್ರ
ನಿಲ್ಲುಸ್ಕೊ. ನಾನು ನಾಳೆ ಬೆಳಿಗಿನಜಾವ 4 ಅಥವಾ 5 ಕೆ
ಬಂದು ಇಸ್ಕೊತಿನಿ. ಕುಕ್ಕೆ ಒಂದ್ ಟ್ರಿಪ್ ಇದೆ.
ನನ್ ಇಲ್ಲ ಅಂದ್ರೆ ನಮ್
ಡ್ರೈವರ್ ಪುನೀತ ಗೊತ್ತಲ್ಲ. ಅವ್ನ್ ಬರ್ತಾನೆ ಕೊಟ್ಬಿಡು. " ಎನ್ನುತ್ತಾ ಅವಸರದಿಂದಲೇ ಹಿಂದೆ ಬಂದಿದ್ದ ಬೈಕ್ ಹತ್ತಿ ಹೊರಟೇಬಿಟ್ಟ.
ಚಳಿಗಾಲವಾದ್ದರಿಂದ
ಕತ್ತಲು ಸಾಮಾನ್ಯಕ್ಕಿಂತ ವೇಗವಾಗಿ ಆವರಿಸಿತ್ತು. ಬತ್ತಿ ಹಚ್ಚಿ ಎರಡು ಡ್ರ್ಯಾಗ್ ಎಳೆದಿದ್ದಷ್ಟೇ.
ಪ್ರಪಂಚವೇ ಮಸುಕಾಗಿತ್ತು ಜನ್ನನಿಗೆ. ಮೊದಲ ಮೂವತ್ತು ನಿಮಿಷ
ಭಾವನೆಗಳ ಏರಿಳಿತ, ಸುಖ ದುಃಖಗಳ ಅವಲೋಕನ.
ನಂತರ ಸುಖ ದುಃಖದ ಭಿನ್ನತೆಯೇ
ಇಲ್ಲದ ಸ್ವರ್ಗ. ಗಾಳಿಯಲ್ಲಿ ತೇಲುತ್ತ ಮಸುಕಾದ ಚಿತ್ರಣ ಚಿತ್ರಿಸುತ್ತ ಕತ್ತಲೆಯ ಕಟ್ಟೆಯಲ್ಲಿ ಮಲಗಿದ್ದ ಜನ್ನ ಕಟ್ಟೆಯ ಮೇಲೆ ಕುಳಿತೆ ಮತ್ತಿನಲ್ಲಿ ಸರ್ವಲೋಕ
ಸಂಚರಿಸಿದ್ದ.
ಬೆಳಿಗ್ಗೆ
ಸುಮಾರು ನಾಲ್ಕು ವರೆ. ಭುಜ ತಟ್ಟಿ
ಎಬ್ಬಿಸಿದ್ದು ಗಿರೀಶ.
"ಇದೇನ್
ಗುರು, ಇಲ್ಲಿಗೆ ಹುಡ್ಕೊಂಡ್ ಬಂದೆ? ಮನೇಲಿ ಕೇಳ್ಕೊಂಡ್ ಬಂದ್ಯಾ?"
"ಇಲ್ವೋ,
ಕಾರ್ ಇಲ್ಲೇ ನಿಂತಿತ್ತಲ್ಲ. ಅದಕ್ಕೆ ಇಲ್ಲೇ ಬಂದೆ. ಇದ್ಯಾಕೆ ಎದ್ವಾತದ್ವ ನಿಲ್ಸಿದ್ಯ ಕಾರ್ ನ"
"ನಾನ್
ಮುಟ್ಟೆ ಇಲ್ವಪ್ಪೋ ನಿನ್ ಕಾರ್ ನ."
"ಇಲ್ದೆ, ತಾನೇ ತಿರುಗಿ ನಿಲ್ತು ಬಿಡು! ನಂಗ್ ಹೊತ್ತಾಯ್ತು ಮಾರಾಯ.
ಸಿಗುವ ಆಯ್ತಾ"
"ಎಲ್ಲಿಗೆ
ಟ್ರಿಪ್?"
"ಶೃಂಗೇರಿ,
ಹೊರ್ನಾಡ್, ಕುಕ್ಕೆ, ಧರ್ಮಸ್ಥಳ "
"ಒಳ್ಳೇದಾಗ್ಲಿ"
ಧೂಳೆಬ್ಬಿಸಿಕೊಂಡು
ಕಾರು ಬರ್ರನೆ ನುಗ್ಗಿತ್ತು.
ರಾಮಣ್ಣ
ಬಸ್ ಸ್ಟಾಂಡ್ ಬಳಿಯ ತನ್ನ ಹೋಟೆಲ್
ತೆಗೆಯಲು ಮುಂಜಾನೆಯೇ ಸಿದ್ದವಾಗಿ ಹೊರಟಿದ್ದವನು, ಜನ್ನನನ್ನು ಕಂಡು ನಿಂತು
"ಲೋ ವಿಷ್ಯ ತಿಳಿತಾ ನಿಂಗೆ?"
"ಏನ್
ರಾಮಣ್ಣ ?"
"ನಿಮ್
ಮಾವನ್ನ ಯಾರೋ ಚಾಕು ಹಾಕಿ
ಖೂನಿ ಅಂತೆ? ಬೆಳಗಿನಜಾವ 2 ಕೆ ಫೋನ್ ಬಂದಿತ್ತಂತೆ
ನಿಮ್ ಅತ್ತೆಗೆ ಪೊಲೀಸ್ ಇಂದ"
"ಓ
ರಾಮಣ್ಣ ಇಂಥ ಸುದ್ದಿ ಕೊಟ್ಟೆ
ಬೆಳಿಗ್ಗೆನೇ, ಯಾರು ಅಂತ ಗೊತ್ತಾಯ್ಥಂಥ?"
"ನಾನ್
ನಿನ್ನೆ ಕೇಳನ ಅಂತ ಮಾಡಿದ್ನಲ್ಲೋ. ಹರಿಯಪ್ಪೋರ್
ಬೈಕ್ ಸ್ವಲ್ಪ ಉಜ್ಜಿತ್ತಂತೆ. ಯಾರೋ ಮೊದ್ಲು ಆಕ್ಸಿಡೆಂಟ್
ಮಾಡ್ಸಿ ಬೀಳ್ಸಿ, ಆಮೇಲೆ ಚೂರಿ ಹಾಕಿರಬೋದು ಅಂದ್ರಂತೆ
ಪೊಲೀಸು, ನಿನ್ ಯಾವದಕ್ಕೂ ವಿಚಾರ್ಸು
ಮಾರಾಯ" ಎಂದು ಅವನ ದಾರಿ
ಹಿಡಿದು ಹೊರಟ ರಾಮಣ್ಣ.
ಜನ್ನನಿಗೆ
ರಾತ್ರಿ ನಶೆಯಲ್ಲಿನ ಕನಸು ನಿಜವಾದಂತೆ ಗೊಂದಲ. ಕಣ್ಣು ಕೆಂಪಾಗಿ ಕೈ ನಡುಕ ಹುಟ್ಟಿಸಿತ್ತು.
ತಾನು ನಶೆಯಲ್ಲಿ ಕಂಡದ್ದಾದರೂ ಏನು? ನೆನಪಿಸಿಕೊಳ್ಳಲು ಪ್ರಯತ್ನ ಮಾಡಿದ. ಎಲ್ಲವು ಮಸುಕು. ಯಾವುದು ಸ್ಪಷ್ಟವಿಲ್ಲ. ಮಲಗುವಾಗ ಯಾರೋ ತನ್ನದೇ ಸುಳ್ಳು ಕಥೆಯ ಹೇಳಿದಂತೆ. ಸುಳ್ಳಾಗಿದ್ದ ಅದೇ ಕಥೆಯೇ ನಿಜವಾಗಿ ತನ್ನ ಎದೆಯ ಮೇಲೆಯೇ ನಿಂತಂತೆ.
ಅಷ್ಟರಲ್ಲಿ ಅವನ ಫೋನ್ ರಿಂಗ್ ಆಗಿತ್ತು.
ಅಷ್ಟರಲ್ಲಿ ಅವನ ಫೋನ್ ರಿಂಗ್ ಆಗಿತ್ತು.
"ಹೇಳು
ಗಿರೀಶ"
"ಲೋ
ಗಾಡಿ ರೈಟ್ ಸೈಡ್ ಗೆ
ಲೈಟ್ ಆಗಿ ಡ್ಯಾಮೇಜ್ ಆಗಿದ್ಯಲ್ಲೋ,
ಎಲ್ಲಿ ಹೋಗಿ ಹೊಡ್ದೆ?"
"ಗಾಡಿ
ಡ್ಯಾಮೇಜ್ಆ"
"ಅದಿರ್ಲಿ,
ಟೂಲ್ ಕಿಟ್ ಬಾಕ್ಸ್ ನಲ್ಲಿ
ಒಂದ್ ಚಾಕು ಇತ್ತು, ನೋಡುದ್ಯ?
ನಮ್ ಅಮ್ಮ ಅಡಿಗೆಗೆ ಚಾಕು
ಇಲ್ಲ ಅಂದಿದ್ರು ಮಾರಾಯ. ತೊಗೊಂಡು ಇಟ್ಟಿದ್ದೆ, ಕಾಣಂಗೆ ಇಲ್ಲ?"
ಬಹಳ ಸುಂದರವಾದ ಕಲ್ಪನೆ ಅಣ್ಣ....👍👌👏
ReplyDeleteಇದನ್ನು ಓದುತ್ತಾ ನನ್ನ ತಾತ ಅವರ ನೆನಪಾಯಿತು,
ReplyDeleteಮುಂದಿನ ಭಾಗಕ್ಕಾಗಿ ಕಾಯುತ್ತಿರುತ್ತೇನೆ ರೋಹಿತ್... 😊
ನೀನು ಪತ್ತೇದಾರಿ ಕವಿತೆಗಳನ್ನು ರಚಿಸು ರೋಹಿತ್,
ReplyDeleteನನಗೆ ತುಂಬಾ ಇಷ್ಟವಾಯಿತು ಇದು... 😍👌🏻