ಭಾಗ 4. ಇನ್ನೋಸೆಂಟ್? ಗಿಲ್ಟಿ? | ರೇಲಿ ಬೈಸಿಕಲ್ಲು

Share:

ರೇಲಿ ಬೈಸಿಕಲ್ಲು!

ಭಾಗ 4.  ಇನ್ನೋಸೆಂಟ್? ಗಿಲ್ಟಿ?
ಕತ್ತಲ ಅಂತರ್ಗತವಿನ್ನೂ ಮಾಸಿರಲಿಲ್ಲ. ಭಾನುವಿನ ಸ್ವಾಗತಕ್ಕಿನ್ನು ಸಮಯವಿತ್ತು. ಜನ್ನ ಗೋಪಿ ಊರಾಚೆಗಿನ ತೋಟದ ಮನೆಗೆ ಪುಟ್ಟುವಿನ ಸ್ಥಿತಿಯ ಪರಿಚಯಕ್ಕಾಗಿ ಹೊರಟಿದ್ದರು. ದಾರಿಯಲ್ಲಿ ಜನ್ನನಿಗೆ ನಾನಾತರಹದ ಗೊಂದಲ. ಗಾಡಿಯನ್ನು ಗುದ್ದಿ ಬೀಳಿಸಿದ ನಂತರ ಟೂಲ್ ಕಿಟ್ ನಲ್ಲಿದ್ದ ಚಾಕು ತೆಗೆದು ತಾನೇ ಅಮಲಿನಲ್ಲಿ ಮಾವನನ್ನು ಕೊಂದಂತೆ. ಮತ್ತೊಮ್ಮೆ, ಪುಟ್ಟು ಚೂರಿಯನ್ನು ಹಿಡಿತು ತನ್ನ ಮಾವನನ್ನು ಹಿರಿಯುವಂತೆ ಅವನ ಕಣ್ಣ ಪರದೆಯ ಮೇಲೆ ಕಾಣಿಸತೊಡಗಿದವು.

ಕಲ್ಪನೆ ಹೆಚ್ಚಿರುವನ ಮನಸ್ಥಿತಿಗೆ ಕೆಲವೊಮ್ಮೆ ಸತ್ಯ ಕಲ್ಪನೆಗಳ ವ್ಯತ್ಯಾಸ ವಿಂಗಡಣೆ ಕಷ್ಟಸಾಧ್ಯ! ಅವನ ಕಣ್ಣ ಮುಂದೆ ಅದೆಷ್ಟು ಸಾರಿ ಆ ಕಲ್ಪನೆಗಳು ಮೂಡಿದವೆಂದರೆ ತೋಟದ ಮನೆ ಸೇರುವಷ್ಟರಲ್ಲಿ ಪುಟ್ಟು ಅಥವಾ ತಾನು, ಇಬ್ಬರಲ್ಲೊಬರೆ ಮಾವನನ್ನು ಕೊಂದಿರುವುದೆಂಬ ಮನಸ್ಥಿತಿಗೆ ತಲುಪಿದ್ದ. 

ತೋಟದ ಮನೆಯ ಕೋಣೆ ರಾತ್ರಿ ಗೋಪಿ ಹೊರಟಾಗ ಹೇಗಿತ್ತೋ ಹಾಗೆಯೆ ಇತ್ತು. ಅತ್ತು ಅತ್ತು ಏನು ಮಾಡಲು ಕಾಣದೆ ಕುಂತಲ್ಲಿಯೆ ಮಲಗಿದ್ದ ಪುಟ್ಟು. ಅವನ ಕಣ್ಣ ಸುತ್ತ ಕಣ್ಣೇರು ಹರಿದು ಒಣಗಿ ಪುಟ್ಟದಾದ ದಾರಿಯೊಂದು ಕಣ್ಣಿನಿಂದ ಕೆನ್ನೆ ಗಲ್ಲದ ತನಕ ನಡೆದಿತ್ತು.

"ಗೋಪಿ, ಚೂರಿ ಅಂತಿದ್ದೆ ಎಲ್ಲಿತ್ತು?"

"ಆಗೋ ಆ ಕೊಕ್ಕೆ, ಅರೆ ಕಾಣ್ತಿಲ್ವಲ್ಲ!"

ಜನ್ನನಿಗೆ ಮೇಲಿಂದ ಮೇಲೆ ಗೊಂದಲ. ಪುಟ್ಟುವನ್ನು ಎಬ್ಬಿಸಿ ಮಾತನಾಡತೊಡಗಿದ.

"ಪುಟ್ಟು, ರಾತ್ರಿ ಎಲ್ಲಾದ್ರೂ ಎದ್ದು ಹೊರಟಿದ್ಯಾ?"

ಕಣ್ಣುಜ್ಜಿಕೊಂಡ ಪುಟ್ಟು ಎದ್ದು "ಇಲ್ಲ ಅಣ್ಣ, ಇವ್ನು ಲಕ್ಷ್ಮಣ ರೇಖೆ ಹಾಕಿ ಹೋಗಿದ್ದ. ಹೇಗೆ ದಾಟೋಕಾಗುತ್ತೆ. ಸುಟ್ಟು ಸತ್ತಿರ್ತಿದ್ದೆ!"

"ಸರಿಯಾಗಿ ನೆನಪ್ ಮಾಡ್ಕೋ ಪುಟ್ಟ. ರಾತ್ರಿ ಎಲ್ಲಾದ್ರೂ ಆಚೆ ಹೋಗಿದ್ಯಾ?"

ಈ ಪ್ರಶ್ನೆಗಳನ್ನು ಆಲಿಸುತ್ತಿದ್ದ ಗೋಪಿಗೆ ಎಲ್ಲವು ಅಸಂಭದ್ದವಾಗಿ ಕಂಡು ಕಣ್ಣು ಪಿಳಿ ಪಿಳಿ ಬಿಡುತ್ತ ನೋಡುತ್ತಿದ್ದ.

"ಇಲ್ಲಣ್ಣ ನಾನಂತೂ ಆಚೆ ಹೋಗಿಲ್ಲ. ರಾವಣ ಯಾರ್ದೋ ವೇಷದಲ್ಲಿ ಬಂದು ನನ್ನ ಹೊತ್ಕೊಂಡ್ ಹೋಗ್ಬಿಟ್ರೆ ಅಂತ ಭಯ ಆಗಿ ನಾನು ಎಲ್ಲೂ ಹೋಗ್ಲೇ ಇಲ್ಲ!"

ಪುಟ್ಟುವಿನ ಮಾತಿನಲ್ಲಿ ಸತ್ಯ ಇದ್ದಂತಿದ್ದರು ಚೂರಿ ಗೋಪಿ ಹೇಳುವ ಜಾಗದಲ್ಲಿ ಕಾಣದಿದ್ದ ಕಾರಣಕ್ಕೆ ಜನ್ನ ಯಾವುದೇ ಸಮಾರೋಪಕ್ಕೆ ಬರಲಿಲ್ಲ.

ಮತ್ತೆ ಪುಟ್ಟನ ಮುಖ ನೋಡಿ "ಈ ಪರಿಶುದ್ಧ ಪುಟ್ಟ ಮನಸ್ಸು ಕೊಲೆ ಮಾಡಿರಲಾದರದು!" ಎಂದು ಮನದಲ್ಲೇ ಹೇಳಿಕೊಂಡ. ಹಿಂದಿನ ದಿನ ಮಾವ ಬೆಲ್ಲು ಹೊಡೆಯುವುದನ್ನು ನಿಲ್ಲಿಸಿ ಬೈದಾಗ ಅವನ ಮುಖದಲ್ಲಾಗಿದ್ದ ಬದಲಾವಣೆ ನೆನೆದು "ಕೊಲೆ? ಇದ್ದುರು ಇರಬಹುದು!"

ಅವನು ಮುಂಚೆ ಅಂದುಕೊಂಡಂತೆ ಕೊಲೆಯ ಪೂರ್ತಿ ಮಾಹಿತಿ ತಿಳಿದು ನಂತರ ಈ ಬಿಂದುಗಳೆಲ್ಲವನ್ನು ಕೂಡಿಸಿ ಒಂದು ತೀರ್ಮಾನಕ್ಕೆ ಬರುವ ಆಲೋಚನೆ ಮಾಡಿದ್ದ. ಅವನು ನೆನ್ನೆ ಸಂಜೆಯಿಂದಲೂ ಮನೆಯಲ್ಲಿರದಿರುವುದು, ಒಬ್ಬನೇ ನಶೆಯಲ್ಲಿ ಮಲಗಿದ್ದುದು, ಕಾರಿನಿಂದ ಮಾವನ ಗಾಡಿಯನ್ನು ಬೀಳಿಸಿದ್ದುದು, ಎಲ್ಲವು ಪೊಲೀಸರಿಗೆ ತಿಳಿದರೆ ಅನುಮಾನ ತೋರುವುದು ಖಚಿತವೆಂದು ಒಳಗೆ ಭಯ ಪಟ್ಟು ನಲುಗಿದ್ದ. ಅಷ್ಟರಲ್ಲಿ ಅವನ ಫೋನ್ ರಿಂಗ್ ಆಗಿತ್ತು.

"ಪೊಲೀಸ್ ಸ್ಟೇಷನ್ ಇಂದ ಕಣಪ್ಪ, ಸೀನಪ್ಪ ಅಂತ ಮಾತಾಡ್ತಿರೋದು. ನಿಮ್ ಮಾವಂದು ಕೊಲೆ ಆಗಿದ್ಯಲ್ಲ ಮಧ್ಯ ರಾತ್ರಿ?  ನೀನು ಈಗ 7 ಗಂಟೆ ಅಷ್ಟ್ರಲ್ಲಿ ಬಂದು ನನ್ನ ಕಾಣು. ಸ್ಟೇಟಮೆಂಟ್ಸ್ ತೊಗೋಬೇಕು ಪ್ರೊಸೀಜರ್, ಸರಿನ! ಹಂಗೆ ನಿಂಗೆ ಏನಾದ್ರು ಹೇಳೋದಿದ್ರೆ ನಿಮ್ ಮಾವನ್ ವಿಚಾರ ನಮಗೆ ಸಹಾಯ ಆಗೋ ಅಂಥದ್ದು, ಹಾ"

ಎಲ್ಲಿ ತನ್ನದೇನು ವಿಷಯ ಅಲ್ಲಿಗೆ ತಲುಪಿದೆಯೋ ಎಂದು ನಡುಗುತ್ತಲೇ ಮಾತನಾಡಿದ್ದ.

"ಸರ್, ನಂಗು ಈಗಷ್ಟೇ ಗೊತ್ತಾಯ್ತು. ಹಾಸ್ಪಿಟಲ್ ಗೆ ಇವಾಗ ಹೊರಟೆ. 7 ಗಂಟೆ ಅಷ್ಟ್ರಲ್ಲಿ ಸ್ಟೇಷನ್ ಕಡೆ ಬರ್ತೀನಿ!"

ಗೋಪಿ ಏನು ಅರ್ಥವಾಗದೇ ಮತ್ತದೇ ಪಿಳಿ ಪಿಳಿ ಕಣ್ಣಿನಿಂದ ಜನ್ನಣ್ಣನನ್ನು ನೋಡುತ್ತಿದ್ದ.

ಅವನ ಮುಖದಲ್ಲಿನ ಪ್ರಶ್ನಾರ್ಥಕವನ್ನು ಕಂಡು ಅವನನ್ನು ಆಚೆಗೆ ಕರೆದು ಜನ್ನ ವಿಷಯ ಪ್ರಸಾರಕ್ಕೆ ಮುಂದಾದ.

"ಗೋಪಿ, ನಮ್ ಹರಿ ಮಾವನ್ನ ಯಾರೋ ಮಧ್ಯ ರಾತ್ರಿ ಕೊಲೆ ಮಾಡಿದ್ದರಂತೋ. ಎಲ್ಲಿ ಏನು ಯಾಕೆ ಇನ್ನು ಗೊತ್ತಿಲ್ಲ. ನೀನು ಈ ಪುಟ್ಟು ವಿಷ್ಯಾನ ನನ್ ಹತ್ರ ಹೇಳಿದಂಗೆ ಯಾರ್ ಹತ್ರಾನೂ ಬಾಯಿ ಬಿಡಬೇಡ. ನಾನು ಹೋಗಿ ವಿಚಾರ್ಸ್ಕೊಂಡ್ ಬರ್ತೀನಿ. ಎಲ್ಲಿ ಹೇಗೆ ಸತ್ತಿದ್ದು ಅಂತ. ಹಾಗೆ ಆ ಚೂರಿ ಎಲ್ಲಿ ಹೊಯ್ತು ಅಂತ ಪತ್ತೆ ಮಾಡು! ಆಯ್ತಾ?"

ಇಷ್ಟೆಲ್ಲಾ ವಿಷಯ ಕೇಳುತ್ತ ಅವನ ಎದೆ ಒಮ್ಮೆಲೇ ಜಲ್ಲೆಂದಿತ್ತು. ವಾಸ್ತವದ ಕಠೋರ ಪರಿಚಯಕ್ಕಿಂತ ಏನು ತಿಳಿಯದೆ ಇರುವ ಸ್ಥಿತಿಯೇ ಚಂದವೆನಿಸಿತು ಗೋಪಿಗೆ. ಬಾಯಿಗೆ ತುರುಕಿ ಕೊಂಡ ಕಾರಣಕ್ಕೆ ಜೀರ್ಣಿಸಿಕೊಳ್ಳಬೇಕಾದ ಅವಶ್ಯಕತೆ ಅವನದು. ಅರ್ಧ ನಿಮಿಷದ ನಂತರ ಜನ್ನನ ಕ್ರಿಯೆಯ ಕರೆಗೆ ಹೂಗುಟ್ಟ.

ಗೋಪಿಯ ಹುಡುಗಾಟಿಕೆಯ ಮುಖ ಒಮ್ಮೆಲೆ ಗಂಭೀರವಾಗುತ್ತದೆ.

"ನಾನು ಹಾಸ್ಪಿಟಲ್ ಹತ್ರ ಹೋಗಿ ಎತ್ತ ಅಂತ ನೋಡ್ಕೊಂಡು, ಹಾಗೆ ಸ್ಟೇಷನ್ ಗು ಹೋಗಿ ವಿಚಾರಿಸಿ ಬರ್ತೀನಿ. ನಿನ್ ಏನು ಗಾಬರಿ ಆಗ್ದೇ ಆರಾಮಾಗಿ ಇಲ್ಲೇ ಇವನ ಜೊತೆ ಆಟ ಆಡ್ಕೋತ, ಆ ಚೂರಿ ಇಲ್ಲೇ ಎಲ್ಲಾದ್ರೂ ಇದ್ದೀಯ ಕಣ್ಣು ಹಾಯಿಸ್ತಾ ಇರು. ಅದು ಇಲ್ಲಿ ಸಿಕ್ರೆ ಪುಟ್ಟ ಆಚೆ ಹೋಗಿಲ್ಲ ಅಂತ ಖಾತರಿ. ನೀನಾಗಲಿ ಅವನಾಗಲಿ ಯಾರ್ ಜೊತೆನೂ ಮಾತಾಡ್ಬೇಡಿ ನಾನು ಬರೋತನಕ. ಏನು?"

"ಸರಿ ಅಣ್ಣ" ಎಂದು ಮತ್ತೆ ಭಯದ ಮುಖದಿಂದ ಹೇಳಿದ್ದ ಗೋಪಿ.

No comments