ಭಾಗ1. ನೆಪ್ಪು | ರೇಲಿ ಬೈಸಿಕಲ್ಲು

Share:
ಮುಂದಿನದು - ಭಾಗ 2. ಅನಿಶ್ಚಿತ

ರೇಲಿ ಬೈಸಿಕಲ್ಲು!

ಭಾಗ1.     ನೆಪ್ಪು



ವಾರಪೂರ್ತಿ ಸಾಫ್ಟ್ ವೇರ್ ಕಂಪನಿಯ ಕೂಲಿ ಜನ್ನ, ವಾರದಕೊನೆಯಲ್ಲಿ ಕೆಂಪು ಬಸ್ ಹತ್ತಿ ಊರಿಗೆ ಹೊರಟಿದ್ದ . ನಿಧಾನವಾಗಿ ಬೆಂಗಳೂರಿನ ಸಂಚಾರ ಸಾಗರದಲ್ಲಿನ ವಾಹನದಲೆಗಳನ್ನು ದಾಟಿದ ಬಸ್ಸು, ಖಾಲಿ ಹೆದ್ದಾರಿ ಮುಟ್ಟಿದಂತೆಯೇ, ಬಿಲ್ಲಿನಿಂದ ಛೂ ಬಿಟ್ಟ ಬಾಣದಂತೆ ವೇಗವನ್ನು ಹೀರುತ್ತಾ, ಮೈಲಿಗಟ್ಟಲೆ ದಾರಿಯನ್ನು ಕ್ಷಣಾರ್ಧದಲ್ಲಿ ಕಬಳಿಸುತ್ತಾ ಹೊರಟಿತ್ತು.

ಜನ್ನ, ಪೂರ್ತಿ ಹೆಸರು ಜನಾರ್ಧನ. ಸೀನಿಯರ್ ಇಂಜಿನಿಯರ್ ವೃತ್ತಿ. ಜೀವನಾಸಕ್ತಿ ತೀರಿದ್ದ ಜನ್ನನಿಗೆ ಸಮಯ ಕಳೆಯುವ ಸಾಧನವಾಗಿಯಷ್ಟೇ ಅವನ ಕೆಲಸ ಉಳಿದು ಕೊಂಡಿತ್ತು. ಬರಹಗಾರನಾಗಬೇಕೆಂಬ ಆಸೆ ತೊರೆದು ತನ್ನ ಸುತ್ತಲಿನವರ ಸಂತೃಪ್ತಿಗಾಗಿ, ಹಸಿವಿಗೆ ಹುಲ್ಲು ಮೇಯಲು ಕಲಿತ ಮಿಗದಂತೆ ತನ್ನ ಇಚ್ಛಾಶಕ್ತಿಗೆ ವಿರುದ್ಧವಾದ ವೃತ್ತಿಯನ್ನು ಆರಿಸಿಕೊಂಡಿದ್ದನು!

ಚಳಿಗಾಲದಲ್ಲೂ ಎಂಥ ಬಿಸಿಲು! ಶಾಲೆಯಲ್ಲಿ ಕಲಿಸುತ್ತಿದ್ದ ಹವಾಮಾನದ ಕಾಲಗಳು ಪಠ್ಯಕ್ಕಷ್ಟೇ ಸೀಮಿತವಾಗಿ, ಬೆಂಗಳೂರು ನಗರ  ಎಲ್ಲ ಕಾಯಿದೆ ಕಟ್ಟಳೆಗಳನ್ನು ಮರೆತು ಮನಸ್ಸಿಗೆ ಬಂದಂತೆ ಬಿಸಿಲು, ಮಳೆ, ಚಳಿಗಳನ್ನು ಕರುಣಿಸಿತ್ತು! ಧಗೆಯ ಬಾಯಾರಿಕೆಗೆ ನೀರಿನೊಂದಿಗೆ ಜನ್ನ ಸಜ್ಜಾಗಿರಲಿಲ್ಲ! ಅದು ತಿಳಿದಿದ್ದರೂ ನಿತ್ಯಕ್ರಮದ ಜೀತನಾದ ಚಿತ್ತನು ಜನ್ನನ ಕೈಯನ್ನು ಬ್ಯಾಗಿನ ಬಲಬದಿಯ ಕಿಸೆಗೆ ಚಾಚುವಂತೆ ಮಾಡಿತ್ತು! ನೀರಿನ ಬಾಟಲಿ ಸಿಗಲಿಲ್ಲವಾದರೂ, ತಮಿಳು ಪೇಪರ್ ನಲ್ಲಿ ರಹಸ್ಯವೆಂಬಂತೆ ಸುತ್ತಿಟ್ಟ ಪೊಟ್ಟಣವೊಂದು ಬೆರಳಿಗೆ ತಾಗಿ, ಜನ್ನನ ಪ್ರಜ್ಞೆ ದುಪ್ಪಟ್ಟು ಮಾಡಿ, ದಿಟ್ಟಿಸಿ ತಟ್ಟನೆ ಅವನ ಅಜ್ಜನ ನೆನಪನ್ನು ತಂದಿಟ್ಟಿತ್ತು .

ಪೊಟ್ಟಣದಲ್ಲಿದ್ದದ್ದು ಅರ್ಧ ಸೇದಿ ಉಳಿಸಿದ್ದ ಹೊಸೂರ್ ಮಾಲು! "ವಯಸ್ಸಾಯ್ತು ಮಾರಾಯ, ಒಟ್ಟಿಗೆ ಪೂರ್ತಿ ಸುರುಳಿ ಅಸಾಧ್ಯ! ಇದನ್ನ ಎತ್ತಿಡು, ಮುಂದಿನ ಸಲಕ್ಕೆ ನೋಡುವ."  ಎಂದಿದ್ದ ಅಜ್ಜ! ಇದರ ಮೇಲೆ ಅಜ್ಜನ ಹೆಸರಿಲ್ಲ ಕಾಣುತ್ತೆ! ಮುಂದಿನಸಲಕ್ಕೆ ಅವನೇ ಇಲ್ಲದಂಗಾಯ್ತು!

ಒಂದು ವಾರದ ಹಿಂದೆ-
ಅಜ್ಜ ಶ್ರೀಕಂಠ ಎಂದಿನ ಶನಿವಾರದಂತೆ ತನ್ನ ಹಳೆಯ ಪೆಟ್ಟಿ ಅಂಗಡಿಯ ಮುಂದು ಕುಳಿತು ಮೊಮ್ಮಗನಾದ ಜನ್ನನ ದಾರಿಯನ್ನು ಕಾಯುತ್ತಿದ್ದ. ಕಾಯುವ ಚಡಪಡಿಕೆ ಜನ್ನನ ಮೇಲಿನ ಪ್ರೀತಿಗಲ್ಲ, ಅವನು ತರುವ ಮತ್ತಿನ ಮಾಲಿಗೆ! ಒಣ ಎಲೆಯನ್ನು ಮಸಿದು ಸುರುಳಿ ಸುತ್ತಿ ಹೊಡಿಯುವಾಗಿನ ಮತ್ತು, ನಶೆ ಸ್ವರ್ಗಕ್ಕೆ ಪರ್ಯಾಯ! ಕ್ಷಣಿಕ ಸಂಬಂಧಗಳ ಸಂತೆಯಲ್ಲಿ ನಶೆ ಮಾಲು ಅಜ್ಜ ಮೊಮ್ಮಗನ ಸಂಬಂಧದ ಜೀವಂತಿಕೆಗೆ ಕಾರಣವಾಗಿತ್ತು!  

ಕಂಠಜ್ಜ ಕಡೆ ಬಾರಿ ಕೇಳ್ತಿದ್ದೀನಿ ನೋಡಪ್ಪ ಕೊಟ್ಬುಡು ಒಂದ್ 5 ಸಾವಿರ ಜಾಸ್ತಿನೇ ಕೊಡೋಣ!" ಎಲ್ಲಿಗೋ ಹೊರಟಿದ್ದ ಅರ್ಜುನನು ಬೈಕ್ ನಿಲ್ಲಿಸಿ ಅಜ್ಜನನ್ನು ವಿನಂತಿಯ ಧ್ವನಿಯಲ್ಲಿ ಕೇಳುತ್ತಾನೆ!

ಅರ್ಜುನ ಬೆಂಗಳೂರಿನ ಯಾವ್ದೋ ಆಂಟಿಕ್ ಮ್ಯೂಸಿಯಂ ನಲ್ಲಿ ಆಂಟಿಕ್ ವೆಹಿಕಲ್ ರಿಸರ್ಚರ್. ಅವನ ಕೆಲಸ ಹಳೆಯ ವಾಹನಗಳನ್ನು ಹುಡುಕಿ ತೆಗೆದು, ಮಾತುಕತೆ ಮುಗಿಸಿ ಕೊಂಡುಕೊಳ್ಳುವುದು. ಕೆಲವು ಬಾರಿ ಬಲವತದಿಂದ, ಕೆಲವೊಮ್ಮೆ ಕಳ್ಳತನದಿಂದ! ಅವನ ಕೆಲಸಕ್ಕೆ ಬೇಕಾದ ಅಕ್ರಮವನ್ನು ಕಲಿತು ಪಳಗಿದ್ದ!

"1952 ನೀನಿನ್ನು ಹುಟ್ಟೇ ಇರ್ಲಿಲ್ಲ. ಅವತ್ತಿಂದ ಸೈಕಲ್ ಹೊಡಿತಾ ಇದ್ದೀನಮ್ಮ ಮರಿ. ಕೊಡಲ್ಲ ಅಂದ್ಮೇಲೆ ಮುಗಿತು, ನಿನ್ ಎಷ್ಟ್ ಸಾವಿರ ಸೇರಿಸಿ ಕೊಟ್ರು ಕೊಡಲ್ಲ!" ತಿರಸ್ಕಾರದಿಂದ ಅಜ್ಜ ಉತ್ತರಿಸುತ್ತಾನೆ!

"ಅಜ್ಜ, ರೇಲಿ ಸೈಕಲ್ ವ್ಯಾಲ್ಯೂ ನಿಮಗೆ ಗೊತ್ತಿಲ್ಲ. ಅದು ಅಲ್ದೆ ನಿಮ್ಮದು ಮೇಡ್ ಇನ್ ಇಂಗ್ಲೆಂಡು. ನಿಮಗೇನ್ ಸೈಕಲ್ ತಾನೆ, ಬೇರೆದ್ ಕೊಡ್ಸೋಣ, ಅದುನ್ನ ಕೊಟ್ಬಿಡಿ!"

"ತುತ್ತರಿಕೆ, ನನ್ ತಲೆ ಹಡ್ಬೇಡ ಹೋಗಪ್ಪ ."

ಇವರ ಮಾತು ಕಥೆಯ ಸಾರ ಅರ್ಥವಾದಂತೆ ಅರ್ಜುನನ ಕೆಡೆ ನೋಡುತ್ತಾ ಬೊಗಳಲು ಶುರು ಮಾಡಿದ್ದ ಕೆಂಚ, ಅರ್ಜುನ ಹೊರಟಮೇಲೆ ತನ್ನ ಗರ್ಜನೆ ನಿಲ್ಲಿಸಿದ್ದು! ಅಜ್ಜನ ಇಷ್ಟ ಕಷ್ಟಗಳನ್ನು ಕೆಂಚ ತನಗೆ ಸಿಕ್ಕಿದ್ದ 5 ವರ್ಷದ ಮಿತಿ ಸಮಯದಲ್ಲಿ ಅರ್ಥೈಸಿಕೊಂಡಿದ್ದ. ಕೆಂಚನ ಇರುವಿಕೆಯ ಕಾರಣದಿಂದಲೇ ಅಜ್ಜನ ಬೈಸಿಕಲ್ ಎರಡು ಬಾರಿ ಕಳ್ಳತನದಿಂದ ಪಾರಾಗಿ ಉಳಿದುಕೊಂಡಿತ್ತು!

ಹಿಂದಿನಿಂದ ಹತ್ತಾರು ಬಾರಿ ಒಮ್ಮೆಲೇ ಸೈಕಲ್ ಬೆಲ್ಲಿನ ಸದ್ದು ಸಂಗೀತ ರೂಪದಲ್ಲಿ ಪ್ರಹರಿಸಲೂ, ಬೆಲ್ಲುಹೊಡಿದು ನಿಲ್ಲಿಸಿದ ಅರ್ಧ ನಿಮಿಷದ ವರೆಗೂ ಅದರ ತರಂಗದ ಟನ್ ಸದ್ದು ಗಾಳಿಯಲ್ಲಿ ತೆಳುತ್ತಲೆ ಇತ್ತು. ಅಜ್ಜ ಬೆಲ್ಲು ಹೊಡೆಯುತ್ತಿದ್ದ ಹುಡುಗನನ್ನು ಗುರುತಿಸಿ “ “ಲೋ ಪುಟ್ಟ, ದಿನ ಅಷ್ಟ್ ಬೆಲ್ ಹೊಡಿತಿ.. ಅಷ್ಟ್ ಲಾಯಕ್ಕಾ ಸದ್ದು ಕೇಳಕ್ಕೆ?”

ಪುಟ್ಟ 'ಹೂ'ಗುಡುತ್ತ ಮತ್ತಷ್ಟು ಬಾರಿ ಬೆಲ್ ಒತ್ತಿದ್ದ.

ಅಜ್ಜನಿಗು ತನ್ನ ಸೈಕಲ್ ಬೆಲ್ಲಿನ ಮರ್ಮ ತಿಳಿದಿತ್ತು.  ಈಗಿನ ತುಕ್ಕಿನ ಬೆಲ್ಲಿನ್ ಥರ ಬಡಿತ ನಿಂತ ತಕ್ಷಣ ಸದ್ದು ನಿಲ್ಲದೆ,  ಕಬ್ಬಿಣದ ಪದರ ಬಡಿದರೆ ಟನ್ ಎಂಬ ಸದ್ದು ತುಂಬಾ ಸಮಯದ ವರೆಗೂ ಜೀವಂತವಾಗಿ ಇರುತ್ತಿತ್ತು. ಹತ್ತು ವರ್ಷದ ಪುಟ್ಟನಿಗೆ ತನ್ನ ಪುಟ್ಟ ಸೈಕಲ್ನಲ್ಲಿ ಇರದ ಸದ್ದು ಅಜ್ಜನ ಹಳೆಯ ಸೈಕಲ್ ನಲ್ಲಿ ಕೇಳಿ ಅದೊಂದು ಮಾಯೆಯಂತೆ ಮ್ಯಾಜಿಕ್ನಂತೆ ಅನ್ನಿಸಿ, ಅಜ್ಜನ ಸೈಕಲ್ ಬೆಲ್ ಒತ್ತುವುದನ್ನು ಪ್ರತಿನಿತ್ಯದ ಕಾಯಕವನ್ನಾಗಿ ಮಾಡಿಕೊಂಡಿದ್ದ. ಅಜ್ಜನಿಗೆ ಕೆಲವು ಬಾರಿ ತಾಳ್ಮೆ ಮೀರಿದರು ಸಹಿಸಿಕೊಂಡು, ತನ್ನ ಚಿಕ್ಕ ವಯಸ್ಸಿನ ಹುಡುಗಾಟಿಕೆ ಯನ್ನು ನೆನೆದು, ಅದರ ಮುಂದೆ ಹುಡುಗನದ್ದು ಕ್ಷುಲ್ಲಕವಾಗಿ ಕಂಡು ಶಾಂತವಾಗುತ್ತಿದ್ದ.

ಅಜ್ಜ ತನ್ನ ಮಗನ ಸಂಸಾರದೊಂದಿಗೆ ಇರುವುದು. ಜನ್ನ ಅಜ್ಜನ ಮಗಳ ಮಗ. ಜನ್ನ ಊರಿಗೆ ಬಂದು ತನ್ನ ಮನೆಗೆ ಹೋಗಬೇಕಾದರೆ ದಾರಿಯಲ್ಲಿಯೇ ಅಜ್ಜನ ಹಳೆಯ ಖಾಲಿ ಬಿದ್ದಿದ್ದ ಅಂಗಡಿ. ಹೀಗಾಗಿಯೇ ಅಜ್ಜ ಮುಂಜಾನೆ ಬೇಗನೆ ಎದ್ದು ಚಡಪಡಿಕೆಯಿಂದ ಅಂಗಡಿ ಬಳಿ ಬಂದು ಜನ್ನನ ದಾರಿಯನ್ನು ಕಾಯುತ್ತಿರುವುದು! ನಶೆಯ ವ್ಯಸನ.

ಚಿಕ್ಕವನಿದ್ದಾಗ ಅಜ್ಜನ ನಶ್ಯ ಡಬ್ಬಿಯನ್ನು ಅವಿತಿಟ್ಟು, ಅದನ್ನು ಸೇವಿಸಬಾರದೆಂಬ ಬುದ್ದಿವಾದ ಹೇಳುತ್ತಿದ್ದ ಜನ್ನ, ಬೆಳೆದನಂತರ ಅಜ್ಜನಿಗೆ ಸೊಪ್ಪು ಸಾಗಿಸಿ ಕೊಡುತ್ತಿದ್ದಾನೆ! ವಯಸ್ಸು, ಅನುಭವ,
ಯಾರು ಶಾಶ್ವತವಲ್ಲವೆಂಬ ಧೋರಣೆಯು, ಎಲ್ಲವು ಸೇರಿ ಅದರಿಂದ ದೇಹಕ್ಕಾಗುವ ಎಂಥದೇ ಪರಿಣಾಮವನ್ನು ಅಲಕ್ಷಿಸಿ, ನಶೆಯಲ್ಲಿನ ಸ್ವರ್ಗವನ್ನು ಅರಿವಿಗೆ ತರುತ್ತದೆ. 

ಈಸಲ ಆದರು ತಂದ್ಯೇನೋ! ಇಲ್ಲ ಒಂದ್ ತಿಂಗಳಿಂದ ಹೇಳ್ತಿದ್ಯಲ್ಲ, ಎಲೆಕ್ಷನ್ನು, ರಿಪಬ್ಲಿಕ್ ಡೇ. ಸಿಗ್ತಿಲ್ಲ ಅಂತ. ಅದೇ ರಾಗ ಹಾಡಿ ಹೋಗ್ತಿಯೋ? ”

"ನಿನ್ ಅದೃಷ್ಟ ಚೆನ್ನಾಗಿತ್ತು." ಎನ್ನುತ್ತ ತಂದಿದ್ದ ಸೊಪ್ಪನ್ನು ಅಜ್ಜನ ಕೈಗಿಟ್ಟ ಜನ್ನ, ಕೆಂಚನಿಗೆ ತಂದಿದ್ದ ಬಿಸ್ಕತ್ತು ಹಿಡಿದು ಕೆಂಚನನ್ನು ಕರೆದ. ಬೇರೆ ಸಮಯದಲ್ಲಿ ಜನ್ನನನ್ನು ಕಂಡು ಮೈ ಕೊಡವಿ ಎಗರಿ ನೊಸಲು ನೆಕ್ಕುತ್ತಿದ್ದ ಕೆಂಚ ಇಂದೇಕೋ, ಅವನನ್ನು ಕಂಡೆ ಇಲ್ಲವೆಂಬಂತೆ ಕುಳಿತಿದ್ದ. ಕರೆದರೂ, ಕೈಲಿದ್ದ ಬಿಸ್ಕತ್ತು ತೋರಿದರು ಆಸಕ್ತಿ ಇಲ್ಲ.

“ಕೊನೆಗೂ ತಂದು ಕೊಟ್ಯಲಪ್ಪ. ಇವತ್ತು ನನ್ ತೀರುದ್ರು ಸೈ ಬಿಡು!" ಎಂದ ಅಜ್ಜ

"ಅಜ್ಜ, ಇದೇನ್ ಬಡೀತು ಇವ್ನಿಗೆ. ಸದ್ದೇ ಇಲ್ದೆ ಮಂಕಾಗಿ ಕುಂತವ್ನೆ?"

"ಅದೇನೋ, ಬೆಳಿಗ್ಗೆ ಇಂದ ಹಂಗೆ. ಬಿಲ್ವಿನ್ ಮಗ ಅರ್ಜುನನ್ನ ನೋಡಿ ಒಂದ್ ಎರ್ಡ್ ದಪ ಗುರ್ ಗುಟ್ಟಿದ್ ಅಷ್ಟೇ. ಮಂಕೆ ಅವ್ನೆ. ಬೆಳಿಗ್ಗೆ ಎದ್ದೋನು, ಮೇಲೆ ನೋಡಿ ಅಳ್ತಿದ್ನಂತೆ. ಶಕುನ ಸರಿ ಇಲ್ಲ. ನಾಯಿ ಮೇಲೆ ನೋಡಿ ಯಮ ಕಂಡ್ರೆ ಅಂತೆ ಹಂಗ್ ಅಳೋದು! ಯಾರೋ ಹೋಗೋದಿದ್ಯಾ ಅಂತ? ಅವಾಗಿಂದ ಏನು ತಿಂದಿಲ್ಲ, ಕುಡ್ದಿಲ್ಲ."

"ಹಂಗ!" ಎಂದ ಜನ್ನ.

"ಅದಿರ್ಲಿ, ಇದೇನ್ ಇವತ್ತು ನನ್ ಕೈಗೆ ಎಲ್ಲ ಕೊಟ್ಟೆ. ನಿನ್ ಬರಲ್ವಾ?"

"ನಂಗ್ ಬೇರೆ ಕೆಲಸ ಇದ್ಯಪ್ಪೋ. ಈಸಲ ನಿನ್ ಒಬ್ನೇ ಆಡ್ಕೋ"

"ಇಷ್ಟೆಲ್ಲಾ ಆಗಲ್ಲ ಮಗ. ನಾನು ಮನೇಲಿ ಇಡುಕ್ ಆಗಲ್ಲ. ಇಷ್ಟು ಇವತ್ತಿಗೆ. ಮಿಕ್ಕಿದ್ದು ನಿನ್ ಇಟ್ಕೊ. ಮುಂದಿನ ವಾರ ಬರ್ತಿಯಲ. ಅವಾಗ ನೋಡುವ."

ಮರುದಿನ

ಬೆಳಗಿನ ಮಸುಕಿನಲ್ಲೇ ಬಾವಿಯ ಹತ್ತಿರ ನಿಂತಿದ್ದ ಮಾವ ಶ್ರೀಹರಿಯನ್ನು ಕಂಡ ಜನ್ನ "ಏನಾಯ್ತು ಮಾವ. ಹಿಂಗ್ ನೋಡ್ತಾ ನಿಂತ್ರಿ?"

"ಲೋ, ಹುಟ್ದಗಿಂದ ಕೆಂಚ ಇಲ್ಲೇ ಇದ್ದಾನೆ. ಬಾವಿಗೆ ಎಂದಿಗೂ ತಪ್ಪಿಯೂ ಜಾರಿದವನಲ್ಲ. ಒಂದೆರ್ಡ್ ಸಲ ಬಿದ್ದಾಗ್ಲೂ ಎದ್ದೆ ಬಂದವ್ನೆ. ಇವತ್ ನೋಡುದ್ರೆ ಹೆಣ ತೇಲ್ತಾ ಇದ್ಯಲ್ಲೋ? ಬಾವಿಗ್ ಬಿದ್ದು ಸಾಯೋ ನಾಯಿ ಅಲ್ವಲ್ಲ ಅಂತ ಯೋಚ್ನೆ"

"ನೆನ್ನೆನು ಯಾಕೋ ಮಂಕಾಗಿನೆ ಇದ್ದ. ಬೇಕೂ ಅಂತ್ಲೇ ಬಿದ್ದು ಸತ್ನಾ ಹೆಂಗೆ?" ಎಂದ ಜನ್ನ!

ಅಷ್ಟರಲ್ಲಿ ಹರಿಯ ಹೆಂಡತಿ ಕೂಗಿನ ಸದ್ದು ಕೇಳಿತ್ತು. ಹರಿ ಬಾವಿಯ ಅಂಗಳದಿಂದ ಮನೆಗೆ ಓಡಿದ್ದ. ಅವನು ಹೋದ ಕೆಲವು ಕ್ಷಣಗಳಲ್ಲಿ ಅಜ್ಜನ ಸಾವಿನ ವಾರ್ತೆ ಜನ್ನನ ಕಿವಿಗೂ ತಲುಪಿತ್ತು! ಆದರೆ ಕೆಂಚನಿಗೆ ಹಿಂದೆಯೇ ಸೂಚನೆ ಇತ್ತು. ಯಜಮಾನನ ಅಗಲಿಕೆಯನ್ನು ಎದುರಿಸುವ ಬದಲು ತನ್ನನ್ನೇ ಸಾವಿಗೆ ಅರ್ಪಿಸಿದ್ದ ಕೆಂಚ! ಕಂಠಜ್ಜನ ಸಾವಿಗೆ ಸಂಗಾತಿ ಕೆಂಚ. ತುಳಿಯಲು ಅಜ್ಜನೂ ಇಲ್ಲದೆ, ಕಾಯಲು ಕೆಂಚನೂ ಇಲ್ಲದೆ ಅನಾಥವಾದದ್ದು ರೇಲಿ ಬೈಸಿಕಲ್ಲು!



No comments