ಅರಿವು (Awareness)

Share:




ಹಯವದನರಾತ್ರಿ ಸೇವಿಸಿದ್ದ ನಿದ್ದೆ ಗುಳಿಗೆಯ ಕಟ್ಟ ಕಡೆಯ ಕಣವೂ ಒಡಲಿನಿಂದ ಕರಗಿ ಖಾಲಿಯಾದ ಕಾರಣ ಎಚ್ಚೆತ್ತ. ಕಿಟಕಿಯ ಅಂಚಿನಿಂದ ಇಣುಕಿ ಅಂಗಳದಲ್ಲಿ ಯಾರಿಗೋ ಕಾಯುವಂತೆ ನಿಂತಿದ್ದ ಮಗ ಪೂರ್ಣಚಂದ್ರನ ನೆರಳಿನ ಗಾತ್ರವನ್ನು ನೋಡುತ್ತಾ, ಜಗತ್ತೆದ್ದು ಬಹಳ ಕಾಲ ಗತಿಸಿರೋದನ್ನು ಲೆಕ್ಕ ಹಾಕಿ "ಮಾತ್ರೆ ಎರಡು  ಹೆಚ್ಚಾಯ್ತು ಕಾಣತ್ತೆ" ಎಂದು ಮನದಲ್ಲೇ ಹೇಳಿಕೊಂಡನು.

ಮಗನ ಕಾಯುವಿಕೆಗೆ ತನ್ನನ್ನೇ ಯಾರಿಗಿರಬಹುದೆಂದು ಪ್ರಶ್ನಿಸಿ, ಉತ್ತರ ಸಿಕ್ಕವನಂತೆ ಗಡಿಬಿಡಿಯಲ್ಲಿ ತಯಾರಾಗಲು ನಿಲ್ಲುತ್ತಾನೆ.

"ಏನಾಯ್ತಂತೆ?"

"ಚಿಕ್ಕಪ್ಪಂಗೆ ಬಾಯಿ ಬಿದ್ದೋಗಿದೆ. ಈಸಲ ಅನುಮಾನ ಅಂದಿದ್ದರಂತೆ ಡಾಕ್ಟ್ರು. ಇದೇ ಕಡೆ ಆಟ ನೋಡ್ಕೊಂಡ್ ಹೋಗ್ಬಿಡಿ ಅಂತ ರಾಘು ಫೋನ್ ಮಾಡಿದ್ದ"

ತನಗಿಂತ ದಶಕ ಸಣ್ಣವನಿದ್ದ ತನ್ನ ತಮ್ಮನಿಗೆ ಪಾರ್ಶ್ವವ ಬಡಿದಿರೋ ಸುದ್ದಿ ಕೇಳಿ ಚೂರು ಮರುಗದವನಂತೆ, "ನಾನು ಬರ್ತೀನಿ ನಡಿ!" ಎಂದಿದ್ದ.

ಬರೋಬ್ಬರಿ ಎಪ್ಪತ್ತು ವರ್ಷದ ನಂತರ ದಿಕ್ಕಿನ ಕಡೆಗ್ ಹೊರಟಿರೋದು! ಕನಕಪುರ ಅನ್ನೋ ಪಟ್ಟಣ ಇನ್ನು ಅವ್ನ ಮನಸಲ್ಲಿ ಕಾನಕಾನಹಳ್ಳಿ ಆಗಿನೇ ಉಳಿದಿತ್ತು!

ಕಾರು ಹತ್ತಿ ಅಪ್ಪ ಮಗ ಹೊರಟ್ರು.

ಧೀರ್ಘಾವಧಿ ನಂತರ ಊರಿಗೆ ಹೋಗ್ತಿದ್ದೀನಿ ಅನ್ನೋ ಕುತೂಹಲ ಸಹಜವಾಗಿ ಇರಬೇಕಿತ್ತಾದ್ರು ತೊಂಭತ್ತು ವರ್ಷದ ಹಯವದನನಿಗೆ ಭಾವನೆ ಸತ್ತಿತ್ತು. ವಯಸ್ಸಿಗೆ ಬಹುಷಃ ಕುತೂಹಲ ಅಸಹಜವೂ ಅರ್ಥಹೀನವೂ ಇರಬಹುದು!

"ಎಷ್ಟ್ ತಾಸಿನ ದಾರಿ ಚಂದ್ರ?"

"Normally ಗಂಟೆ, ಟ್ರಾಫಿಕ್ ಇದ್ರೆ ಹೇಳೋಕ್ ಬರಲ್ಲ!"

"ಎರಡಾ? ನಾನು ಊರು ಬಿಟ್ಟು ಬಂದಾಗ ಕೆ ಏನ್ ಎಸ್ ಬಸ್ಸು ಸೌತ್ ಎಂಡ್ ಗೆ ಐವತ್ತು ನಿಮಿಷ ನೋಡಪ್ಪ!"

"ಹೂ ನೀವ್ ಊರ್ ಬಿಟ್ಟಾಗ ಬೆಂಗಳೂರು, ಯಡಿಯೂರ್ ಕೆರೆಗೆ ಮುಗಿತಾ ಇತ್ತು. ಇವಾಗ ತಲಘಟ್ಟಪುರ ತನಕ ಬೆಳ್ಕೊಂಡ್ ನಿಂತಿದ್ಯಲ್ಲ!"

ಊರಿಗೆ ಹೊರಟಿರೋದು, ಫ್ಲಾಶ್ ಬ್ಯಾಕ್ ಮನಸ್ಸಿನ ಟ್ರಡಿಷನ್ ಅನ್ನೋ ಹಾಗೆ ತನ್ನ ನೆನಪಿನ ಮಸ್ತಕ ಓದೋಕೆ ಶುರು!

ಹದಿನಾರೋ ಹದಿನೆಂಟೋ, ಕನಕಪುರ ಬಿಟ್ಟು ಬೆಂಗಳೂರು ಅನ್ನೋ ಕೊಂಪೆಗೆ ಬಿದ್ದಾಗ! ಊರು ಬಿಟ್ಟಿದ್ದಲ್ಲ, ಅಪ್ಪ ದಬ್ಬಿದ್ದು! ಬಡತನ ಕೆಲಸ ಮಾಡಿ ತಂದು ಹಾಕು ಅಂತ!  ಹೋಟೆಲ್ ಮಾಣಿ ಕೆಲಸ, ಊಟ ತಿಂಡಿ ಇರೋಕೆ ಜಾಗ ಎರಡು ರೂಪಾಯಿ ಸಂಪಾದನೆ, ಅಷ್ಟೂ ಮನೆಗೆ ರವಾನೆ!

ಅಪ್ಪ ಸತ್ತ ಸುದ್ದಿ ಕೇಳ್ದಾಗ ಖುಷಿ ಆಗಿತ್ತು!  ಕಳಿಸಬೇಕಿರೋ ದುಡ್ಡನ್ನ ನಿಲ್ಲಿಸಬೋದು ಅಂತ! ತಮ್ಮಂಗೆ ನಾಲ್ಕೋ ಆರೋ ವರ್ಷ. ಸಂಬಂಧ ಆವಾಗ ಬೇಕಿರಲಿಲ್ಲ! ಈಗ ಬೇಕು ಅಂತಲ್ಲ, ವಯಸ್ಸಾಗ್ತಾ ಸಮಯ ಕಳೆಯೋದು ಕಷ್ಟ ಅಂತ ಅಷ್ಟೇ ಅವನ್ನ ನೋಡೋಕೆ ಹೊರಟು ನಿಂತಿರೋದು! 

ಎರಡಾಗಿ ಮೂರು ತಾಸು ದಾಟಿದ ಪ್ರಯಾಣ, ದಾರಿಯಲ್ಲಿ ಕಳೆದೇ ಹೋಗಿದ್ದ ಒಂದ್ ಎರಡು ಕೆರೆಗಳು, ನಾಪತ್ತೆಯಾಗಿರೋ ಬೆಟ್ಟ ಗುಡ್ಡಗಳು, ಹಸಿರಿನ ಸೀರೆ ಬಿಟ್ಟು ನಗ್ನವಾಗಿ ನಾಚಿಕೆ ಇಲ್ಲದೆ ನಿಂತಿರೋ ಊರುಗಳು ಇವೆಲ್ಲ ಒಟ್ಟಾಗಿ ಕೂಡಿ ಅವನ ಊರಿನಲ್ಲಿ ಅವನನ್ನೇ  ಪರದೇಸಿಯಾಗಿ ಮಾಡಿದ್ದವು!   

"ಗುರುವಾರ ಇವತ್ತು. ಅರ್ಕಾವತಿ ಟಾಕೀಸ್ ರಸ್ತೆ ತೊಗೋಬೇಡ . ಸಂತೆ ಇರುತ್ತೆ!"

"ಸಂತೇನ! ಮೇನ್ ರೋಡ್ ಇದು. ಹಾಕೊಂಡ್ರೆ ಫೈನ್ ಕಟ್ಟಬೇಕು! ನಿಮ್ ಸಂತೆ ಊರಾಚೆಗೆ ಶಿಫ್ಟ್ ಆಗಿದೆ "  

ಕನಕಪುರ ಅವನ ಕಣ್ಣಿಗೆ ಭೀಕರ ಬೋಳಾಗಿ ಕಂಡಿತುರಸ್ತೆ ಅಗಲೀಕರಣದ ಹೆಸರಿನಲ್ಲಿ ಊರನ್ನೇ ತೆರವು ಗೊಳಿಸಿದಂತೆ "ಮುಖ್ಯ ರಸ್ತೆಯಲ್ಲಿ ಅಂಗಡಿಗಳಿಲ್ಲಮರ ಮನೆಗಳಿಲ್ಲಕರಿಯಪ್ನೋರ್ ಕಾಲೇಜು ರೋಡ್ಗೆ  ಬಂದಿದೆಥುತ್ ಊರಿಗೆ ರಸ್ತೆನೋರಸ್ತೆಗೆ ಊರೋ?" ಎಂದು ಶಪಿಸಿದ.

ಅಲ್ಲಲ್ಲಿ ಶ್ರದ್ಧಾಂಜಲಿ ಬೊರ್ಡುಗಳು. ಕೆಲವನ್ನು ಗುರುತಿಸಿದ. ಅವನ ಸ್ನೇಹಿತರು, ಕೆಲವು ಸ್ನೇಹಿತರ ಮಕ್ಕಳು! ಮರುಕ ಇಲ್ಲ. ಯಾರ ಸಾವಿಗೂ ಮರುಕ ಇಲ್ಲ! ಅವನ ದೀರ್ಘಾಯಸ್ಸಿನಲ್ಲಿ "ಯಾರೂ ಮರುಗುವಿಕೆಗೆ ಅರ್ಹರಲ್ಲ" ಅನ್ನೋ ಸತ್ಯದ ಅರಿವು ಆಗಿದ್ದಿರಬೋದು?          

ಮನೆ ಸೇರೋದ್ರಲ್ಲಿ ಬಿಸಲು ಕೆಂಪಾಗಿ, ಕೆಂಪು ತಂಪಾಗಿ, ಕಪ್ಪಾಗಿತ್ತು. ಅದೇ ಮನೆ ಅದೇ ರಸ್ತೆ! ರಸ್ತೆ ಯಾಕೋ ಚಿಕ್ಕದಾಯ್ತ ಅಂತ? ಹೇ ಇಲ್ಲ, ನನ್ನ ಪುಟ್ಟ ಕಾಲು ಬೆಳೆದು ನಿಂತಿರೋದು! 

ಕಾರಿನಿಂದ ಇಳೀತಾನೆ. ಪೂರ್ವ ದಿಕ್ಕಿನಿಂದ ಅಪರಿಮಿತ ಗಾಳಿ! ದಿಕ್ಕಿನಿಂದ ಬೀಸ್ತಿದ್ದ ಗಾಳಿ ಅಸಾಧ್ಯವೊಂದು ಸಾಧ್ಯವಾದಂತೆ. ಪೂರ್ವ ದಿಂದ ಇಷ್ಟು ಗಾಳಿ ಬೀಸಬಾರದಲ್ಲಿ ಎಂದಿತ್ತು ಅವನ ಆರನೇ ಇಂದ್ರಿಯ

ರಾಘವೇಂದ್ರ, ಸಚ್ಚಿದಾನಂದನ ಮಗ. ಅಂದರೆ ತನ್ನ ಸ್ವಂತ ತಮ್ಮನ ಮಗ, ಬಾಗಿಲಲ್ಲಿ ನಿಂತು ತನ್ನ ದೊಡ್ಡಪ್ಪ ಮತ್ತವನ ಮಗನನ್ನು ಬರಮಾಡಿಕೊಳ್ಳಲುಏನೇನನ್ನು ಪ್ರತಿಕ್ರಿಯಿಸದೆ "ಗಾಳಿ ಯಾಕೆ ಪೂರ್ವ ದಿಂದ ಬೀಸಬಾರದು?" ಅನ್ನೋ ಅಸಂಬಧ್ಧ ಪ್ರಶ್ನೆಗೆ ಉತ್ತರ ಹುಡುಕುತ್ತ ಮನೆಯೊಳಗೆ ಹೊರಟ.

 ಬಂದಿರೋ ಮುಖ್ಯ ಕಾರ್ಯ, ಬದುಕಿದ್ದಾಗಲೇ ತಮ್ಮನನ್ನು ನೋಡಿ ಹೋಗುವುದು.

"ಎಲ್ಲಿ ಆನಂದ?"

"ರೂಮಿನಲ್ಲಿ ಇದ್ದಾರೆ ದೊಡ್ಡಪ್ಪ"

ಕೋಣೆಯ ಕದ ದಾಟಿದ, ಬಲಹೀನ ತಮ್ಮ ಅಣ್ಣನನ್ನು ನೋಡಿ ಗುರುತಿಸಿ "ಲಾಏ ಯೂ ವಿವೇ ..." ಮಾತನಾಡಲು ಪ್ರಯತ್ನ. ಬಾಯಿ ಬಿದ್ದಿದ್ಯಲ್ಲ? ಮಾತು ಕಥೆ ಹೀಗೆ!

ತನಗಿಂತಲೂ ಹತ್ತನ್ನೆರಡು ವರ್ಷ ಚಿಕ್ಕವನಾದ ತಮ್ಮನ ಸ್ಥಿತಿ ಅವನಿಗೆ ವಯಸ್ಸಿನ, ಸಾವಿನ ಭಯ ತರ್ಲಿಲ್ಲ. ಬಹುಷಃ ತನ್ನನ್ನೇ ಈ ಜಗತ್ತಿಗೆ ಅಮುಖ್ಯನೂ ಅಪ್ರಧಾನನೂ ಅಂತ ತಿಳಿದಿದ್ದಾನೋ  ಏನೋ?

ಚೂರು ಭಾವನೆ ಇಲ್ಲ! ತಮ್ಮನ ಸ್ಥಿತಿಯಲ್ಲೂ "ಗಾಳಿ ಪೂರ್ವದಿಕ್ಕಿನಿಂದ ಇಲ್ಲಿ ಅಷ್ಟು ವೇಗವಾಗಿ ಯಾಕೆ ಬೀಸಬಾರದು?" ಪ್ರಶ್ನೆಗೆ ಉತ್ತರ ಹುಡುಕುತ್ತ ತಮ್ಮನನ್ನು ನೋಡಿ "ನಾವು ನೋಡಿದ್ದಾಯ್ತು ನೀನಿನ್ನೂ ಸಾಯಬಹುದು" ಎಂದು ಮನದಲ್ಲೇ ಹೇಳಿಕೊಂಡ.  

ಕಟುಕ! ಸ್ವಭಾವತಃ ಅಲ್ಲ, ಅನುಭವದ ಕಾರಣ ಕಟುಕ! ತನಗಿಂತಲೂ ಚಿಕ್ಕವರ ಸಾವು ವಯಸ್ಸಿನಲ್ಲಿ ಅವನಿಗೆ ಭಯ, ಅನುಕಂಪ, ಮರುಕ ತರೋದೆ ಸತ್ಯವಾದ್ರೆ ಅವನ ಬದುಕಿನ  ಸುದೀರ್ಘಅನುಭವಕ್ಕೆ  ಲಜ್ಜೆಗೇಡಾದೀತು! 

ಊಟ ಮಾಡಿ ನಿದ್ದೆ ಮಾತ್ರೆ ತೊಗೊಂಡು ಮಲಗಿದ್ದಷ್ಟೆಮತ್ತೆ ಮಾತ್ರೆ ಕರಗೋ ಗತಿವರೆಗೂ ನಿದ್ದೆ! ಎಪ್ಪತ್ತು ವರ್ಷದ ನಂತರ ಆ ಮಣ್ಣಿನ ವಾಸನೆಯಲ್ಲಿ ಮತ್ತೆ ನಿದ್ದೆ! 

 ಸಮಯ ಏಳುವರೆ. ಪೂರ್ವದಿಕ್ಕಿಗೆ ಮುಖ ಮಾಡಿ ನಿಂತಿರೋ ಮನೆ. ಮನೆ ಬಾಗಿಲು ತೆರೆದಿರೋ ಕಾರಣ ಎಳೆಬಿಸಿಲು ಮಲಗಿದ್ದ ಹಯವದನನ ಮುಖಕ್ಕೆ ಚೆಲ್ಲಿತ್ತು.

ಮುಂಜಾನೆ ಮಾತ್ರೆ ಕರಗೋವರೆಗೂ ಕಾಯದೆ ಎಬ್ಬಿಸಿತ್ತು ಅವನ ಇಂದ್ರಿಯ! ಎಳೆ ಬಿಸಿಲನ್ನು ನೋಡಿ ಥಟ್ಟನೆ ರಾತ್ರಿ ಅವನ ಇಂದ್ರಿಯ ಕೊಟ್ಟಿದ್ದ ಸೂಚನೆಯನ್ನು ನೆನಪಿಸಿಕೊಂಡ. 

"ಪೂರ್ವದಿಂದ ಗಾಳಿ ಬೀಸಲಸಾಧ್ಯವಲ್ಲಿ! ಅಸಂಭವ! ಬಿಸಿಲು ಹೇಗೆ ಒಳಗೆ ಬಂತು? ಅದೇ ಜಾಗ, ಅದೇ ಊರು, ಅದೇ ಮನೆ. ನೆನ್ನೆ ಗಾಳಿ, ಇಂದು ಬಿಸಿಲು! ಎಂಥ ಬಂಡೆ ಅದು!" ಎಂದು ಗೊಣಗುತ್ತ ಎದ್ದು ಮನೆ ಬಾಗಿಲಿಗೆ ಹೋಗಿ ನಿಲ್ಲುತ್ತಾನೆ. ಯಾಕೋ ಮರುಕ. ಏನೋ ಸಂಕಟ!

ಏನೋ ನೆನಪಿಸಿಕೊಂಡು ಸ್ವಲ್ಪ ನಸು ನಕ್ಕ.

ಅವನು ಬಾಲ್ಯದಲ್ಲಿದ್ದಾಗ, ಅವನ ಪಕ್ಕದ ಮನೆಯಲ್ಲೇ ಯಾರ್ದೋ ಮದ್ವೆ! ಕತ್ತಲೆಲಿ ಬಂದಿದ್ದ ಮಧುಮಗ, ಬೆಳಕರ್ದಾಗ  ಬಂಡೆನ ನೋಡಿ "ಬೆಟ್ಟ ಬಿದ್ದೋಯ್ತಾದೆ ಓಡ್ರಪ್ಪೂ" ಅಂತ ಅರಚಿ ಕೂಗಾಡತಾ ಓಡೋಗಿದ್ನಂತೆ!

ಎಂಥ ಮಹಾನ್ ಬಂಡೆ! ರಾವಣನ ತಲೆ ತರ ಹರಡಿಕೊಂಡಿತ್ತು. ಬುಡ ಎಲ್ಲೋ ತುದಿ ಎಲ್ಲೋ. ರಾವಣನ ತಲೇನೆ ಸೈ. ಹೊಸಬರು ನೋಡಿದ್ರೆ ಬಿದ್ದೆ ಹೋಗುತ್ತಾ ಅನ್ನೋಹಾಗೆ ಕಾಣ್ತಿದ್ದ ರಣಬಂಡೆ!
ಎಂಥ ಭೀಮನ ಬಂಡೆ ಅದು! ಎಂಥಾ ಎತ್ತರ. ಸೂರ್ಯ ಸುಮಾರು ತಾಸು ಹುಟ್ಟೋದೆ ತಿಳಿತಿರ್ಲಿಲ್ಲ. ಬಂಡೆ ಮುಂದಕ್ಕೆ ಬೆಳಕಾಗ್ತಿದ್ದಿದ್ದೆ ಮಧ್ಯಾಹ್ನದ್ ಮೇಲೆ. ಕೇರಿಗೆ ಕೇರಿನೇ ಗ್ರಹಣದಲ್ಲಿ ಮುಳುಗಿಸಿರ್ತಿದ್ದ ಬಂಡೆ ಅದು! ಗಾಳಿ, ಮಳೆನೇ ಅಲ್ಲಿ ಸ್ವಲ್ಪ ನಿಂತು ಇದಕ್ಕೆ ಸಲಾಂ ಹಾಕಿ ಹೋದಂತಿತ್ತು, ಅಂಥಾ ರಾಕ್ಷಸ ಬಂಡೆ!              

" ಅಂಥಾ ಬಂಡೆ ಬುಡಸಮೇತ ನಾಪತ್ತೆ! ಕ್ವಾರೆ ಅಂತೆ, ಕಲ್ಲಂತೆ, ದುಡ್ಡ೦ತೆ , ಊರು ಉಳಿಸಲ್ಲ ಬೋಳಿಮಕ್ಳು! " ಮನಸಲ್ಲೇ ಶಪಿಸಿದ.

ಕಣ್ಣಲ್ಲಿ ಯಾಕೋ ನೀರಿನ ಪಸೆ! ಮುದುಕನಿಗೆ ಜಗತ್ತಿನಲ್ಲಿ ಯಾರು ಮುಖ್ಯರು ಯಾರು  ಅಮುಖ್ಯರು ಅನ್ನೋ ಸತ್ಯ ಅರ್ಥವಾಗಿಹೋಗಿತ್ತು!

ಸ್ನೇಹಿತರ ಸಾವಿಗ್ ಅಲ್ಲ, ಸ್ನೇಹಿತರ ಮಕ್ಳ ಸಾವಿಗೂ ಅಲ್ಲ, ಅಷ್ಟೇ ಯಾಕೆ ತನ್ನ ಸ್ವಂತ ತಮ್ಮನ ಸ್ಥಿತಿಗೂ ಜಗ್ಲಿಲ್ಲ! ಅವನು ಸಾರ್ವಕಾಲಿಕ ಸತ್ಯವೆಂದೂ, ಶಾಶ್ವತವೆಂದೂ ನಂಬಿದ್ದ ಬೃಹತ್ ಬಂಡೆಯ ನಾಪತ್ತೆಗೆ ಮರುಕ!            



   

ಹಿನ್ನುಡಿ 


ಇಂತಹ ಕಲ್ಪನೆಗಳು ಕಥೆಗಳಾದಾಗ ನೀರಸವಾಗಿಯೇ ಇರುತ್ತವೆ. ಕಲ್ಪನೆಯ ಆಶಯ ಶ್ರೇಷ್ಠವೆಂದರೆ ಅತಿಶಯೋಕ್ತಿಯಂತೂ ಅಲ್ಲ. ಬೆಂಗಳೂರು ಬೆಳೀತಿದೆ, ನಮ್ಮೂರು ಬೆಳೀತಿದೆ. ಖುಷಿ ಪಡ್ಬೇಕಾ? ನಾವ್ ಆಟ ಆಡ್ತಿದ್ದಿದ್ ಗಲ್ಲಿ ಇಂದು ಸಂಚಾರ ದಟ್ಟಣೆ ಇರೋ ಮುಖ್ಯ ರಸ್ತೆ! ನಾನು ಅಲ್ಲೀಗ ಪರಕೀಯ! 

6 comments:

  1. ಮೂರು ದಿನ ಬದುಕಲು, ನೂರು ಚಿಂತೆ ಏತಕ್ಕೆ.....ಬಂದಂತೆ ಬದುಕುವುದೇ ಜೀವನ....

    ReplyDelete
  2. ಬಂಡೆ ಚೂರ್ ಚೂರ್ ಮಾಡ್ಬುಟ್ರು

    ReplyDelete
  3. ಎಲ್ಲರಿಗೂ ಇದು ಅರ್ಥ ಆಗುವುದಿಲ್ಲ,
    ಅರ್ಥ ಆದರೂ ತಲೆ ಕೇಳಿಸಿಕೊಳ್ಳಲು ಹೋಗುವುದಿಲ್ಲ,
    ಎಲ್ಲವೂ ಬದಲಾದ ಮೇಲೆ ಮೊದಲು ಎಷ್ಟು ಚೆನ್ನಾಗಿತ್ತು,
    ಕಾಲ ತುಂಬಾ ಕೆಟ್ಟುಹೋಗಿದೆ ಕಣ್ರೀ ಎನ್ನುವ ಜನರೇ ಹೆಚ್ಚು ರೋಹಿತ್...

    ReplyDelete
  4. 😍😘😍😘😍😘😍😘😘

    ReplyDelete
  5. ಕನಕಪುರ, ಬೆಂಗಳೂರು ಬದಲಾಗಿರೋದನ್ನ explain ಮಾಡಿರೋದು ತುಂಬಾ ಚೆನ್ನಾಗಿದೆ. ಕತೆಯ concept ಸೂಪರ್. ಕನಕಪುರದ ಸುತ್ತಮುತ್ತ ಇರೋರ್ಗೆ ತುಂಬಾ relate ಆಗೋ ಅಂಥ subject. ಹಯವದನನ ಮನಸ್ಥಿತಿ explain ಮಾಡಿರೋ ರೀತಿಯಲ್ಲಿ originality ಇದೆ....

    ReplyDelete