ಹಿಂದಿನದ್ದು - ಚಿರಾಯು -1
ಒಂದತ್ತು ನಿಮಿಷದ ಹುಡುಕಾಟದ ನಂತರ ಮಂಜು
ಕಾಣದ ವರದಿ ಕೊಟ್ಟಿದ್ಲು ಮಡದಿ. ಮುಂಜಾನೆ,
ಅಜ್ಜ ಮೊಮ್ಮೊಗನ ಸಂಪೂರ್ಣ ಸಂಭಾಷಣೆ ಆಲಿಸಿದ್ದ ರಾಮಣ್ಣನಿಗೆ ಮಂಜುವಿನ ಕಳುವಿನ
ಮರ್ಮ ಅರ್ಥವಾಗಲು ಬಹಳ ಸಮಯ ಹಿಡಿಯಲಿಲ್ಲ.
ತಡ ಮಾಡದೇ ರಾಮಣ್ಣ, ಮಂಜು ಬಹಳ ಸಮಯ ಕಳೆಯುತಿದ್ದ ಪಕ್ಕದ ಮನೆಯ ಹುಡುಗ ಗೋಪಿಯನ್ನು ಕೂಗಿ ಕರೆದ.
"ಗೋಪಾಲ, ಮಂಜುನ
ಕಂಡಿದ್ಯ?"
"ಹುಂ ಮಧ್ಯಾಹ್ನ ಅತ್ತಕಡೆ ಬಂದಿದ್ನಲ್ಲ, ಅದೇನ್
ಬಯಲಾಟ ನೋಡ್ಕೊಂಡ್ ಬಂದಿದ್ನೋ. ತಪಸ್ಸು ಮಾಡೋದ್ ಹೇಗೆ ಅಂತೇನೇನೋ ಕೇಳ್ತಿದ್ದ."
"ನೀನ್ ಏನ್ ಹೇಳುದ್ಯೋ?"
"ನಂಗೆಲ್ಲ ಏನ್ ಗೊತ್ತಿತ್ತು ಅಪ್ಪಯ್ಯ,
ಗೊತ್ತಿಲ್ಲ ಅಂದ್ರೆ ಬಿಡಂಗೆ ಇಲ್ಲ ಅವ. ಅದ್ಕೆ ಸುಮ್ನೆ
ಯಾರು ಇಲ್ಲದೆ ಇರೋ ಕಡೆ ಮಾಡ್ಕೋ ಹೋಗು ಅಂದಿದ್ದೆ, ಕಾಲು ಕಿತ್ತಿದೋನು ಮತ್ತೆ ಸಿಕ್ಕಿಲ್ಲ" ಎನ್ನುತ್ತ ಗೋಪಿ ಮರಳಿ ಅವನ ಬಿಡಾರದತ್ತ ಹೊರಟ.
ಮೂರುವರೆ ವರ್ಷದ ಮಗ ಕಾಣ್ತಿಲ್ಲ ಅನ್ನೋ ಸಿಡಿಲು ಬಡಿಬೇಕಿತ್ತಾದರೂ, ಹೆಂಡ್ತಿ ಮುಂದೆ ಸಂಯೋಜನೆ ತೋರಿಸೋ ಸಲುವಾಗಿ ನಿರ್ಭಾವುಕನಂತೆ ಆಚೆ ಬಂದು ಎದುರಿನ
ದಾರಿ ನೋಡುತ್ತಾ ನಿಂತ.
ಹಗಲಲ್ಲಿ ನೋಡಿದಾಗ ಒಮ್ಮೆ ಕಾಣುತ್ತಿದ್ದ
ಹೆಮ್ಮರ, ಊರಾಚೆಗಿನ ಬಂಡೆ, ಕೆರೆ
ಸುತ್ತ ಹರಡಿಕೊಂಡಿದ್ದ ಹೊಲೆಯರ ಗುಡಿಸಿಲಿನ ಸಾಲುಗಳು ಕತ್ತಲಲ್ಲಿ ಕರಗಿ ಆಕಾರ ಕಳೆದುಕೊಂಡು ಉಧೋ
ಎನ್ನುತ್ತಿದ್ದವು. ಎಲ್ಲೋ ದೂರದಲ್ಲೊಂದು ಕತ್ತಲ ಗರ್ಭದಲ್ಲಿ ಚೆಲ್ಲಿದ್ದ ದೀಪ, ಅಲ್ಲಲ್ಲಿ ಸೀಳು ನಾಯಿಗಳು, ಇದನ್ನೆಲ್ಲಾ ನೋಡಿ
ತನ್ನ ಪುಕ್ಕಲು ಮಗನ ಸ್ವಭಾವ ತಿಳಿದಿದ್ದ ರಾಮಣ್ಣ, ಅವನು
ಮನೆ ಬಿಟ್ಟು ಹೋಗಿರುವ ಸಾಧ್ಯತೆಯನ್ನು ಸಂಪೂರ್ಣ ತಳ್ಳಿ ಹಾಕಿ ತನ್ನ ತಂದೆಯನ್ನು ವಿಚಾರಿಸಲು ತೀರ್ಮಾನಿಸಿದ.
ಅಜ್ಜ ನಿದ್ದೆಯಲ್ಲೂ ಎದ್ದಂತೆಯೇ ಇತ್ತು!
"ಅಪ್ಪ, ಮಂಜುನ
ಕಂಡ್ರ?"
"ನಮ್ಮಪ್ಪ ಸತ್ತಿದ್ದು ನಾನು ಎಂಟಿದ್ದಾಗ! ಅವರಅಣ್ಣ ಅದೇನೋ ಮಾಟ ಮಾಡ್ಸಿದ್ನಂತೆ! ನೀರಿಗ್ ಬಿಟ್ರೆ
ಹತ್ತಾರ್ ತಾಸು ಈಜ್ತಿದ್ದೋನು, ನೀರಲ್ಲೇ ಬಿದ್ದು ವದ್ರಾಡಿ ಸತ್ತ! "
ರಾಮಣ್ಣ ಸೃಜನಶೀಲತೆಯ ಕೊರತೆಯಿಂದ ತನ್ನಜ್ಜನ
ಹೆಸರೇ ಮಗನಿಗೂ ಇಟ್ಟಿದ್ದ.
"ನಿಮ್ಮಪ್ಪ ಮಂಜುನಾಥ ಅಲ್ಲ, ನಿಮ್ ಮೊಮ್ಮಗನ ನೋಡುದ್ರಾ ಕೇಳಿದ್ದು!"
"ನಾ ಕಂಡಿಲ್ಲ. ತೀರಕ್ಕೇನಾದ್ರೂ ಹೋದ್ನ
ಅಂತ? ಹುಣ್ಣಿಮೆ ಮಗಾ, ಅಲೆ
ಬಲ ಹೆಚ್ಚಿರ್ತು!"
ತಾನು ಎಷ್ಟೋ ದಶಕಗಳ ಹಿಂದೆ ಬಿಟ್ಟಿದ್ದ
ಕರಾವಳಿಯ ತನ್ನೂರಿಗೆ ನಿದ್ದೆಯ ಮಂಪರಿನಲ್ಲೇ
ಸಂಚಾರ ನಡೆಸಿದ್ದ ಶಂಕ್ರಜ್ಜ. ಅಜ್ಜನ ಆ ಮಾತು
ಕೇಳಿ ರಾಮಣ್ಣನ ಪಿತ್ಥ ಹತ್ತಿತ್ತು. ಅಷ್ಟರಲ್ಲಿ ಕರಿಯ ಕುಯ್ ಕುಯ್ ಗುಡುತ್ತ ರಾಮಣ್ಣನ ಕಾಲಿನ
ಸುತ್ತ ವರ್ತುಲ ಹೊಡೆಯುತ್ತಾ ತನಗೇನೋ ತಿಳಿದ ಗುಟ್ಟನ್ನು ಬಿಚ್ಚಿಡಲು ಹೆಣಗುತ್ತಾ, ಉಪ್ಪರಿಗೆಯ ದಾರಿ ತೋರಿದ್ದ.
ರಾಮಣ್ಣನ ಅಕ್ಕಂದಿರು ಸಂಗೀತಾಭ್ಯಾಸಕ್ಕೆ
ಬಳಸುತ್ತಿದ್ದದ್ದು ಉಪ್ಪರಿಗೆಯ ಕೋಣೆ. ಅವರ ಮದುವೆಯ ನಂತರ, ನುಡಿಸಲು
ಯಾರೂ ಇರದೆ ನಿರ್ಗತಿಕರಾಗಿ ಬಿದ್ದಿದ್ದ ವೀಣೆ ಬಿಟ್ಟರೆ ಮತ್ಯಾರನ್ನು ಆ ಕೋಣೆ ಆಗಾಗ್ಗೆ
ನೋಡುತ್ತಿರಲಿಲ್ಲ.
ಕರಿಯನ ಹೆಜ್ಜೆ ಹಿಡಿದು ನಡೆದಿದ್ದ ರಾಮಣ್ಣ
ಕಂಡದ್ದು ಪಂಚೆಯ ಮಗ್ಗುಲ್ಲಲ್ಲಿ ಮಣೆ ಮೇಲೆ ಕುಳಿತಂತೆಯೇ ಮಲಗಿರುವ ಮಂಜುವನ್ನು.
ಕರಿಯನ ಕುಯ್ ಕುಯ್ ಗಲಭೆ ಕಿವಿಗೆ
ಚುಚ್ಚುತ್ತಿದ್ದಂತೆ ಕಣ್ಣು ಬಿಟ್ಟಿದ್ದ ಮಂಜು.
ಮಗನ ಸ್ಥಿತಿಯ ಸೂಕ್ಷ್ಮವನ್ನರಿತಿದ್ದ ರಾಮಣ್ಣ ಹೆಚ್ಚಿನ ಪ್ರಜ್ಞೆಯಿಂದ ನಾಲಗೆ ಹೊರಳಿಸಲು ನಿರ್ಧರಿಸಿದ.
"ಏನು ಮಗ ಇಲ್ಲಿ? ಎಂತ ಮಾಡ್ತಿದ್ದಿ?"
"ಅಜ್ಜಂಗೆ ವಯಸ್ಸಾಯ್ತಂತೆ. ಅದಕ್ಕೆ
ದೇವ್ರನ್ನ ಕರೀತಿದ್ದೆ ತಪಸ್ಸು ಮಾಡ್ತಾ !"
"ಮಕ್ಳು ತಪಸ್ಸು ಮಾಡುದ್ರೆ ದೇವ್ರು
ಬರಲ್ಲ ಮಗ. ಅದಕ್ಕೆ ಹದಿನೆಂಟು ಇಪ್ಪತ್ತು ಆಗಿರ್ಬೇಕು!"
"ಹಾಂಗಾಯ್ತ! ಮತ್ತೆ ನೀನ್ ಮಾಡು!"
ಇದನ್ನು ಕೇಳಿ ತಬ್ಬಿಬ್ಬಾಗಿ ರಾಮಣ್ಣ ದೀರ್ಘ
ಉಸಿರು ಎಳೆಯುತ್ತ ತನ್ನ ಚಿತ್ತದಲ್ಲೇ ಒಂದು ಸಣ್ಣ ಕಥೆಯ ಸೃಷ್ಟಿಸುತ್ತಾನೆ.
"ನಿಂಗೆ ಅಜ್ಜ ಹೇಳೋದ್ ಮರ್ತಿರಾ ಅಂತ?
ಅಜ್ಜ ಊರಲ್ಲಿಪ್ಪಾಗ ಅದ್ಯಾವ್ದೋ ಸರ್ಪಕ್ಕೆ ಸಾಯ್ತಿರಕ್ಕೆ ಹಾಲು ಕೊಟ್ಟಿರಂತೆ, ಉಳ್ಸಿದ್ರಂತೆ. ಅದಕ್ಕೆ ಸುಬ್ರಮಣ್ಯ ಮಾಮಿ ವರ ಕೊಟ್ಟಿರಂತೆ! ಅಜ್ಜ ನೂರಾಗದೆ
ಸಾಯಲ್ಲ ಮಗ."
"ಹೌದಾ! ನೂರಾಗಿದ್ ಮತ್ತೆ?"
"ಅಷ್ಟೊತ್ತಿಗೆ ನಿಂಗು
ಇಪ್ಪತ್ತಾಗಿರ್ತು. ಆಗ ತಪಸ್ಸು ಮಾಡು. ನಿಮ್ಮಜ್ಜನ್ ಉಳ್ಸು. ಈಗ ನಡಿ ಮಗ ಊಟ ಮಾಡಿ
ಮಲಗುವ!!"
"ನೆನಪು ಎಷ್ಟ್ ಚಂದ!"
ಹೊಗೆಯಲ್ಲಿ ಮುಳುಗಿದ್ದ ಮಂಜುನಾಥ ಹೇಳ್ಕೊಂಡ! ತನ್ನ ಕಥೆಗೆ ತಾನೇ ಪ್ರೇಕ್ಷಕನಾಗಿ ಯಾರದ್ದೋ
ನಿರೂಪಣೆಯಂತೆ ಹೇಳಿಕೊಂಡಾಗ ಆಗೋ ಕಸಿವಿಸಿ ಒಂಥರಾ ಮಧುರ ಅನುಭವ!
ಅಜ್ಜ ಹೇಳಿದ್ ಕಥೆಗಳು ಇಂದು ನಂಬಿಕೆಗೆ ಅನರ್ಹವಾಗುತ್ತ
ಹೋಗಿದ್ವು! ದಿನ ಕಳ್ದಂತೆ ಮುಗ್ಧತೆ ಮಾರಿ ನಕ
ಶಿಕಾಂತ ನಿರ್ಭಾವುಕನಾಗಿ ನಿಂತಿದ್ದ.
ಇಪ್ಪತ್ತಾಗ್ಲಿ, ತಪಸ್ಸಿಗ್
ಹೋಗಿ ಅಜ್ಜನ್ನ ಇನ್ನು ಉಳುಸ್ತೀನಿ ಅನ್ನೋ ಹುಮ್ಮಸ್ಸು ದಿನ ಕಳ್ದಂತೆ ಕಮ್ಮಿ ಆಗಿ, ಕಡೆಗೆ ಅಜ್ಜ ಆರೋಗ್ಯ ಕೆಟ್ಟಾಗ ಇವ್ರ್ ಸೇವೆ ಯಾವನ್ ಮಾಡತಾನೆ, ಮುದುಕ ಬೇಗ ಹೋಗ್ಲಿ ಅನ್ನೋವರಗೂ ಬಂದು ನಿಂತಿತ್ತು ಮಂಜುವಿನ ಉದ್ದೇಶದ ತಿರುವು!
ಅಜ್ಜ ಸತ್ತು ೬ ವರ್ಷ ಆಯಿತು ಅಂತ
ನೆನುಸ್ಕೊಳ್ತಾನೆ.. ಕಣ್ಣಲ್ಲಿ ಯಾಕೋ ನೀರು... ಅಜ್ಜನ ಸಾವಿನ ನೆನಪಿಗಲ್ಲ. ತನ್ನದೇ ಮುಗ್ಧತೆಯ
ಸಾವಿಗೆ ಶೋಕದ ಕಣ್ಣೇರು!!!
ನಿಜ ರೋಹಿತ್, ನಾವು ಮಕ್ಕಳಾಗಿದ್ದಾಗ ಇರುವ ಮುಗ್ಧತೆ ವಯಸ್ಸಾದ ಮೇಲೆ ಇರುವುದಿಲ್ಲ...
ReplyDelete